ಕನ್ಯಾಕೋಳೂರ ಗ್ರಾಮದಲ್ಲಿ ನೀರವ ಮೌನ
ಶಹಾಪುರ: ತಾಲೂಕಿನ ಕನ್ಯಕೋಳೂರ ಗ್ರಾಮದಲ್ಲಿನ ಓಣಿಗಳಲ್ಲಿ ತಿರುಗಾಡಿದರು ಎಲ್ಲಡೆ ಸಂಪೂರ್ಣ ಮೌನ ಆವರಿಸಿದ್ದು, ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ವಿಶ್ವಾಸ ತುಂಬುವ ಕೆಲಸ ನಡೆಸಿದ್ದರೂ ಜನತೆ ಮಾತ್ರ ಆತಂಕ ಗಾಬರಿಯಿಂದ ಹೊರಬಂದಿಲ್ಲ.
ಎಂಥಹುದೇ ಸಂದರ್ಭದಲ್ಲಿ ಶಾಂತಿಯಿಂದಲೇ ವರ್ತಿಸಿದ ಗ್ರಾಮದಲ್ಲಿ ಈಬಾರಿ ಇಡೀ ರಾಜ್ಯವೇ ಗಮನ ಸೆಳೆಯುವ ಹತ್ಯೆ ನಡೆದಿರುವುದು ಇಡೀ ಗ್ರಾಮದಲ್ಲೆಡೆ ಮತ್ತು ತಾಲೂಕಿನಲ್ಲಿಯು ಆತಂಕ ಸೃಷ್ಟಿಸಿದೆ. ದಿನನಿತ್ಯ ಪರಸ್ಪರ ಪ್ರಿತಿ, ವಿಶ್ವಾಸದಿಂದ ಹಲವಾರು ಸಮಸ್ಯೆಗಳನ್ನು ಒಬ್ಬರಿಗೊಬ್ಬರು ಪರಿಹಾರ ಕಂಡುಕೊಳ್ಳುವ ವಾತಾವರಣ ವಿದ್ದಂತಹ ಕನ್ಯಕೋಳೂರು ಗ್ರಾಮದಲ್ಲಿ ಜಾತಿ ವೈಷ್ಯಮ್ಯದ ಕಿಡಿ ಹಬ್ಬಿರುವುದು ಸಾಮಾಜಿಕ ಸ್ವಾಸ್ಥ್ಯ ಹಾಳು ಗೆಡುವುದಕ್ಕೆ ಕಾರಣವಾಗಿದೆ. ಸಮಸ್ಯೆಗಳು ಎಷ್ಟೆ ಗಂಭೀರವಾಗಿದ್ದರೂ ಅದನ್ನು ಪರಿಹರಿಸಿಕೊಳ್ಳುವ ಮೂಲಕ ವಿಶ್ವಾಸದಿಂದ ಬದುಕು ಸಾಗಿಸುವ ಕಾರ್ಯ ನಡೆಯಬೇಕಿದೆ. ಆಗಿರುವ ಘಟನೆ ಸಾರ್ವತ್ರಿಕವಾಗಿ ಖಂಡನೀಯವಾಗಿದ್ದು, ತಪ್ಪಿತಸ್ಥರಿಗೆ ಕಾನೂನಿನ ಕ್ರಮವಾಗುವುದರ ಜೊತೆಗೆ ಮೃತ ಕುಟುಂಬದವರಿಗೂ ಆತ್ಮ ವಿಶ್ವಾಸ ತುಂಬುವ ಕಾರ್ಯ ಸರ್ಕಾರದಿಂದ ನಡೆಯುವುದು ಸದ್ಯದ ಪ್ರಮುಖ ಕರ್ತವ್ಯ.
ವಿವಿಧ ಸಂಘಟನೆಗಳಿಂದ ಮನವಿ: ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್. ಆಂಜನೇಯ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಆಗಮಿಸಿದ್ದಾಗ ದಲಿತ ಸಂಘರ್ಷ ಸಮಿತಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರಾ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರವಾದ), ಪ್ರಾಂತ ಕೃಷಿ ಕಾರ್ಮಿಕರ ಸಂಘ, ಅಲ್ಲದೇ ವಿವಿಧ ಸಂಘಟನೆಗಳು ಮನವಿ ಪತ್ರ ಸಲ್ಲಿಸಿ ಮೃತ ಕುಟುಂಬದವರಿಗೆ ಹೆಚ್ಚಿನ ಪರಿಹಾರ ಕೊಡಬೇಕು.
ಜೊತೆಗೆ ಆರೋಪಿಗಳನ್ನು ತಕ್ಷಣ ಬಂದಿಸಬೇಕು ಮತ್ತು ಯಾದಗಿರಿ ಜಿಲ್ಲೆಯಲ್ಲಿ ಮೇಲಿಂದ ಮೇಲೆ ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದ್ದು, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.