ಗಣರಾಜ್ಯೋತ್ಸವ ಸಿದ್ಧತಾ ಸಭೆಗೆ ಸೂಚನೆ
ಆಳಂದ: ಜ. 22ರವರೆಗೆ ನಡೆಯಲಿರುವ ಮೊದಲ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಹಸೀಲಾರ ಪರಮೇಶ್ವರ ಕೆ. ಸ್ವಾಮಿ ಅವರು ಸೂಚಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಕರೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.1-5 ವರ್ಷದ ಎಲ್ಲಾ ಮಕ್ಕಳಿಗೆ 2 ಹನಿ ಪೋಲಿಯೋ ಹಾಕಿ ಪೋಲಿಯೋ ಮುಕ್ತ ರಾಷ್ಟ್ರಕ್ಕೆ ಸಹಕರಿಸಬೇಕೆಂದರು.
ಸಿಡಿಪಿಓ ಅಶೋಕ ರಾಜನ್, ತಾಲೂಕು ಆರೋಗ್ಯಾಧಿಕಾರಿ ಡಾ. ಸುಚಿತ್ರಾ ಬಿಲಗುಂದಿ ಹಾಜರಾಗಿದ್ದರು. ಈ ಮಧ್ಯೆ ತಹಸೀಲ್ದಾರ ಅವರು, ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ ಕುರಿತು ರೂಪರೇಷ ಹಾಕಿಕೊಂಡು ಆಯಾ ಇಲಾಖೆಗೆ ಸಂಬಂಧಿತ ಜವಾಬ್ದಾರಿಯನ್ನು ರವಾನಿಸಿದರು. ಕೈಗಾರಿಕೆ ವಿಸ್ತರಣಾಧಿಕಾರಿ ಜಾಫರ್ ಅನ್ಸಾರಿ, ಖಜಾನೆ ಲೆಕ್ಕಾಧಿಕಾರಿ ಬಾಬುರಾವ್ ಕೋಬಾಳಕರ್, ಜಿಪಂನ ದತ್ತಾ ಪೋದ್ದಾರ, ಪಿಡಬ್ಲೂಡಿ ವಿಜಯಕುಮಾರ ಚಿಟಗುಪಕರ್, ಕಂದಾಯ ನಿರೀಕ್ಷಕ ಅಬ್ದುಲ ವಾಹಬ್, ಪುರಸಭೆ ಆರ್ಐ ಹುಸನಪ್ಪಾ, ಎಸ್ಐ ರಾಘವೇಂದ್ರ ದೇವದುರ್ಗ, ವೀರಯ್ಯಾ ಸ್ವಾಮಿ ಪಾಲ್ಗೊಂಡಿದ್ದರು.
ಚೌಡಯ್ಯ ಜಯಂತಿಗೆ ಆದೇಶ: ಜ.21 ರಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆಗೆ ಸರ್ಕಾರ ಆದೇಶಿಸಿದೆ. ತಪ್ಪದೆ, ನಾಗರಿಕರು ಮತ್ತು ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ ಪರಮೇಶ್ವರ ಕೆ. ಸ್ವಾಮಿ ಸಭೆಯಲ್ಲಿ ಹೇಳಿದರು.