ಗ್ರಾಮಕ್ಕೆ ಸಚಿವ ಆಂಜನೇಯ ಭೇಟಿ
ಶಹಾಪುರ: ಕೆಳವರ್ಗದ ಜನತೆಯ ಸಾಮಾಜಿಕ ನ್ಯಾಯಕ್ಕೆ ಸ್ಪಂದಿಸುತ್ತ ಶೋಷಣೆರಹಿತ ಮುಕ್ತ ಸಮಾಜದ ಚಿಂತನೆ ಹೊತ್ತು ಕಂದಾಚಾರಗಳಿಗೆ ವಿರೋಧ ವ್ಯಕ್ತಪಡಿಸುತ್ತ ವಿಶೇಷವಾಗಿ ಪ್ರಾಣಿ ಬಲಿ ನಿಷೇಧದ ಬಗ್ಗೆ ಧ್ವನಿ ಎತ್ತುತ್ತಿದ್ದ ದೇವಿಂದ್ರಪ್ಪ ದಳಪತಿಯನ್ನೆ ಬಲಿ ತೆಗೆದುಕೊಂಡಿದ್ದು ಅತ್ಯಂತ ಹೇಯ ಕೃತ್ಯ. ಇದನ್ನು ಯಾರಿಂದಲೂ ಸಹಿಸಲು ಸಾಧ್ಯವಿಲ್ಲ. ದುಷ್ಕೃತ್ಯವೆಸಗಿದವರು ಎಂಥವರೇ ಇರಲಿ 24 ಗಂಟೆಗಳಲ್ಲಿ ಅವರನ್ನು ಬಂಧಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಪೋಲಿಸರಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು. ತಾಲೂಕಿನ ಕನ್ಯಾಕೋಳೂರ ಗ್ರಾಮದಲ್ಲಿ ದಳಪತಿ ಮನೆಗೆ ಭೇಟಿ ನೀಡಿ ಮೃತರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿ ದೇವಿಂದ್ರಪ್ಪನ ಪರಿವಾರಕ್ಕೆ ಅವರು ಸಾಂತ್ವನ ಹೇಳಿದರು. ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂಥ ಘಟನೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದರು. 5 ಲಕ್ಷ ಪರಿಹಾರ, ಸರ್ಕಾರಿ ನೌಕರಿಯ ಭರವಸೆಯನ್ನು ಸಚಿವರು ನೀಡಿದರು.
ಉಸ್ತುವಾರಿ ಸಚಿವರಿಂದ ಸಾಂತ್ವನ:
ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಾಬುರಾವ ಚಿಂಚನಸುರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರ ನಿಮ್ಮ ಕುಟುಂಬದ ಹಿತ ರಕ್ಷಣೆಗಿದೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿದೆ ಎಂದರು.
ಶಾಸಕ ಗುರುಪಾಟೀಲ, ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ, ಐಜಿಪಿ ವಜೀರ ಅಹ್ಮದ್, ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಮತ್ತು ಮುಖಂಡರಾದ, ಬಸವರಾಜಪ್ಪಗೌಡ ದರ್ಶನಾಪುರ ಈ ಸಂದರ್ಭದಲ್ಲಿ ಹಾಜರಿದ್ದರು.