ವಸತಿ ಯೋಜನೆಯಲ್ಲಿ ಅವ್ಯವಹಾರ: ಆರೋಪ
ಗುಲ್ಬರ್ಗ: ಆಳಂದ ತಾಲೂಕಿನಲ್ಲಿ 2013-14ನೇ ಸಾಲಿನ ವಿವಿಧ ವಸತಿ ಯೋಜನೆಗಳ ಫಲಾನುಭವಿ ಪಟ್ಟಿ ಗ್ರಾಮ ಸಭೆ ನಡೆಸದೇ ನೇರವಾಗಿ ಪಟ್ಟಿ ರೂಪಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಹರ್ಷಾನಂದ ಸುಭಾಷ ಗುತ್ತೇದಾರ ಆರೋಪಿಸಿದ್ದಾರೆ.
ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಜಾಗೃತ ಸಭೆ ನಡೆಸದೆ ತಾಲೂಕಿನ 10 ಗ್ರಾಮಗಳಲ್ಲಿ 15 ಗ್ರಾಮಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.ಶಾಸಕ ಬಿ.ಆರ್. ಪಾಟೀಲ್ ಅವರು ಸಾರ್ವಜನಿಕವಾಗಿ ಮಾಧ್ಯಮಗಳ ಮೂಲಕ ಅರ್ಹ ಫಲಾನುಭವಿಗಳ ಪಟ್ಟಿ ರೂಪಿಸುವಂತೆ ಹೇಳುತ್ತಾ, ಹಿಂಬಾಗಿಲಿನಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ತಮ್ಮ ಹಿಂಬಾಲಕರಿಗೆ ಮನೆ ಮಂಜೂರಾತಿ ಮಾಡಿಸುತ್ತಿರುವುದು ಯಾವ ಪಾರದರ್ಶಕತೆ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಸರ್ಕಾರಕ್ಕ ಮಂಜೂರಾತಿಗಾಗಿ ಕಳುಹಿಸಿದ ಪಟ್ಟಿಯನ್ನು ತಡೆಹಿಡಿದು ನಿಯಮ ಉಲ್ಲಂಘಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ರಾಜೀವ್‌ಗಾಂಧಿ ಬಸವ ವಸತಿ ಯೋಜನೆ ವ್ಯವಸ್ಥಾಪಕರಿಗೆ ಹರ್ಷಾನಂದ ಆಗ್ರಹಿಸಿದ್ದಾರೆ.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಗುಲ್ಬರ್ಗ: ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ಶಾರದಾ ವಿದ್ಯಾಲಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಸೊನ್ನಾಲಗಿ ಸಿದ್ದರಾಮೇಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ಗುರುಮಹಾಂತ ಶ್ರೀ ಸಾನ್ನಿಧ್ಯ ವಹಿಸಿದ್ದರು. ಡಾ. ಪಂ. ಶಿವಕುಮಾರ ಶಾಸ್ತ್ರಿಗಳು ಪುರಾಣ ಪ್ರವಚನ ಮಾಡಿದರು. ಜ.22ರವರೆಗೆ ಪುರಾಣ ಪ್ರವಚನ ನಡೆಯಲಿದೆ ಎಂದು ಸಹ ಶಿಕ್ಷಕ ಗೋಳಾ ತಿಳಿಸಿದ್ದಾರೆ.