ಸುದ್ದಿ ಸಂಕ್ಷೇಪ
ಉನ್ನತ ತನಿಖೆಗೆ ಆಗ್ರಹ
ಗುಲ್ಬರ್ಗ: ಶೂಟೌಟ್ ಪ್ರಕರಣದಲ್ಲಿ ವೀರಮರಣವನ್ನಿಪ್ಪಿದ ಮಲ್ಲಿಕಾರ್ಜುನ ಬಂಡೆಯವರಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ವತಿಯಿಂದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆ. ರಾಜ್ಯ ಸರ್ಕಾರ ಹುತಾತ್ಮ ಬಂಡೆಯವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಹಾಗೂ ರಾಜ್ಯ ಸರ್ಕಾರ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಎಂ.ಬಿ. ಸಜ್ಜನ್ ಒತ್ತಾಯಿಸಿದೆ. ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಯವರ ಮೇಲಿನ ಶೂಟೌಟ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಸತ್ಯಾಂಶವನ್ನು ಬಹಿರಂಗ ಪಡಿಸಲು ದಲಿತ ರಾಜ್ಯಪಾಲರಿಗೆ ಒತ್ತಾಯಿಸಿದೆ. ಜಿಲ್ಲೆಯ ಜನತೆಯ ಮನದಲ್ಲಿ ಮೂಡಿರುವ ಅನುಮಾನಗಳಿಗೆ ಉತ್ತರಕೊಡಿಸಬೇಕು ಎಂದು ದಲಿತ ಸೇನೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಹನುಮಂತ ಜಿ. ಯಳಸಂಗಿ, ನಾಗೇಂದ್ರ ಕೆ. ಜವಳಿ, ಮೋಹನಂದ ಎಚ್. ಕೋರೆ, ಸಾಯಿಬಣ್ಣ ಬೆಳಗುಂಪಾ, ಸಂತೋಷ ಪಾಳಾ, ಶ್ರೀನಿವಾಸ ಸರಡಗಿ ಹಾಗೂ ವಿಜಯಕುಮಾರ ಜೋಗುರು ಇದ್ದರು.
ದುರಂತ; ಪರಿಹಾರಕ್ಕೆ ಆಗ್ರಹ
ಗುಲ್ಬರ್ಗ: ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆರಿ ಅಂಬಲಗಾ ಗ್ರಾಮದಲ್ಲಿ ಮನೆಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಮನೆಗಳು ಕಳೆದುಕೊಂಡ ಬಡ ಕುಟುಂಬಗಳಿಗೆ ವಸತಿ ಮತ್ತು ಪರಿಹಾರ ಕಲ್ಪಿಸಿಕೊಡಬೇಕೆಂದು ಬಹುಜನ ಜಾಗೃತಿ ವೇದಿಕೆ ಆಗ್ರಹಿಸಿದೆ. ಕೆರೆ ಅಂಬಲಗಾ ಗ್ರಾಮದ ಹಣಮಂತ ರಾಮಚಂದ್ರ ಕುಮಸಿ, ನಾಗಪ್ಪ ರಾಮಚಂದ್ರ, ರೇವಣಸಿದ್ದಪ್ಪ ಪರಸಪ್ಪ ಕುಮಸಿ ಮತ್ತು ಶರಣಬಸಪ್ಪ ರೇವಣಸಿದ್ದಪ್ಪ ಕುಮಸಿ ಅವರ ಮನೆಗಳು ಬೆಂಕಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿ ಸುಮಾರು ರು. 2 ಲಕ್ಷ ನಷ್ಟವಾಗಿದೆ. ಆದ್ದರಿಂದ ಈ ಬಡ ಕುಟುಂಬಗಳಿಗೆ ಶಾಸಕರು ವಸತಿ ಮತ್ತು ಪರಿಹಾರವನ್ನು ಕಲ್ಪಿಸಿ ಕೊಡಬೇಕೆಂದು ಬಹುಜನ ಜಾಗೃತಿ ವೇದಿಕೆ ಶಾಸಕರಿಗೆ ಮನವಿ ಸಲ್ಲಿಸಿದೆ. ಪ್ರವೀಣ ಕುಮಾರ ಸುಜಾತ, ಆಳಂದ ತಾಲೂಕಾದ್ಯಕ್ಷ ರವಿ. ಆರ್. ಕೋರೆ, ಮಲ್ಲಿಕಾರ್ಜುನ ಎಲ್ ಕೆರಮಗಿ, ಶಂಕರ ಆರ್. ಕೆರಮಗಿ, ಶಾಂತಪ್ಪ ಎಸ್. ಸಾಗರ, ಪಂಡಿತ ನವಲೆ ಇದ್ದರು.
ಶಾಲಾ ಪರಿಕರಗಳ ಕೊಡುಗೆ
ಗುಲ್ಬರ್ಗ: ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿ. ಬೆಂಗಳೂರು ಚಿಂಚೋಳಿ ತಾಲೂಕಿನ ಕಲ್ಲೂರ್ ರೋಡ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತವಾಗಿ ಶಾಲಾ ಪರಿಕರಗಳ ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಚಿಂಚೋಳಿ ಶಾಸಕ ಡಾ. ಉಮೇಶ ಜಿ. ಯಾದವ್ ಕಾರ್ಯಕ್ರಮ ಉದ್ಘಾಟಿಸುವರು. ಶಾಲಾ ಅಭಿವೃದ್ಧಿ ಅಧ್ಯಕ್ಷ ವೆಂಕಟೇಶಗೌಡ ಗುತ್ತೇದಾರ ಅಧ್ಯಕ್ಷತೆ ವಹಿಸುವರು. ಎಂಸಿಎಫ್‌ನ ಉಪ ಮಹಾಪ್ರಭಂದಕ ಜಿ. ಗುರುನಾಥ ಪರಿಕರ ಹಸ್ತಾಂತರ ಮಾಡಲಿದ್ದಾರೆ. ಜಂಟಿ ನಿರ್ದೇಶಕ ಜೆ.ಎಚ್ ಮೊಕಾಶಿ, ತಾಪಂ ಸದಸ್ಯೆ ಕಮಲಮ್ಮ ವೀರಣ್ಣ ಗುತ್ತೇದಾರ, ಗ್ರಾಪಂ ಸದಸ್ಯ ಗುಂಡುರಾವ್ ಮರಾಠ, ಪ್ರಗತಿಪರ ರೈತ ಮಧುಸೂದನ ರೆಡ್ಡಿ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಪರಿಸರ ಜಾಗೃತಿ ಜಾಥಾ ಸಂಪನ್ನ
ಗುಲ್ಬರ್ಗ: ಮಹಾಂತೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕ ಹಾಗೂ ಹಸಿರು ಪಡೆ ಇಕೋಕ್ಲಬ್ ವತಿಯಿಂದ ಗೊಬ್ಬೂರವಾಡಿ ತಾಂಡದಲ್ಲಿ ಪರಿಸರ ಜಾಗೃತಿ ಕುರಿತು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಘೋಷಣೆಗಳನ್ನು ಹಾಕುತ್ತಾ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು. ಪ್ರಾಚಾರ್ಯ ದಯಾನಂದ ಬಂದರವಾಡ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ವೀರಣ್ಣ ಡಿ. ಪಣಣ್ಣ, ಸುರೇಶ ರಾಠೋಡ ಹಾಜರಿದ್ದರು.
22ರಿಂದ ಮಹಾಪುರುಷರ ಜಯಂತಿ
ಗುಲ್ಬರ್ಗ: ಭಾರತ ಮುಕ್ತಿ ಮೋರ್ಚಾ ಜಿಲ್ಲಾ ಘಟಕ ವತಿಯಿಂದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಜ್ಯೋತಿಬಾ ಪುಲೆ ಸ್ಮರಣಾರ್ಥ ಮಹಾಪುರುಷರ ಸಾಮೂಹಿಕ ಜಯಂತಿ ಕಾರ್ಯಕ್ರಮ ಜ. 22ರಿಂದ 31 ರವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಿವಿಧ ಗಣ್ಯರು, ಬುದ್ಧಿ ಜೀವಿಗಳು, ಸಾಹಿತಿಗಳು ಉಪನ್ಯಾಸ ನೀಡಲಿದ್ದಾರೆ ಎಂದು ರಾಜ್ಯಾಧ್ಯಕ್ಷ ಪ್ರೊ. ಸುಭಾಷ ಶೀಲವಂತ, ಸಂಯೋಜಕ ಡಾ. ನಾಗರತ್ನ ಬಿ. ದೇಶಮಾನ್ಯೆ, ಹಾಗೂ ಶಿವಶಣಪ್ಪ ದೇವನೂರು ತಿಳಿಸಿದ್ದಾರೆ.
ಭ್ರಷ್ಟ ವಿರೋಧಿಗೆ ಆದ್ಯತೆಯಿರಲಿ
ಗುಲ್ಬರ್ಗ: ದೇಶದಲ್ಲಿರುವ ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಯಿಂದ ದೇಶದ ಜನತೆ ಬೇಸತ್ತು ಹೋಗಿದ್ದಾರೆ. ದೇಶದ ಜನತೆ ಎಚ್ಚೆತ್ತು ಮುಂದಿನ ದಿನಗಳಲ್ಲಿ ವಿಶ್ವ ಬ್ಯಾಂಕಿನಲ್ಲಿರುವ ಕಪ್ಪು ಹಣ ವಾಪಸ್ಸು ತರುವ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಮಾಡುವವವರನ್ನು ಮತ ಹಾಕಬೇಕೆಂದು ಅಖಿಲ ಭಾರತ ಹಿಂದು ಮಹಾಸಭಾ ರಾಜ್ಯಾ ವಿಭಾಗೀಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷಕ್ಕೆ ನೇಮಕ
ಗುಲ್ಬರ್ಗ: ಮಲ್ಲಿಕಾರ್ಜುನ ಮಲ್ಲಪ್ಪ ಸಾವೂರ ಅವರನ್ನು ಸಮಾಜವಾದಿ ಪಕ್ಷ ಗುಲ್ಬರ್ಗ ನಗರ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಗುರುರಾಜ ಕುಲ್ಕರ್ಣಿ ತಿಳಿಸಿದ್ದಾರೆ.
ಇಂದು ಉದ್ಘಾಟನೆ
ಗುಲ್ಬರ್ಗ: ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯು ಜ.20ರಿಂದ ವಿದ್ಯುತ್ ಸುರಕ್ಷತಾ ಜಾಗೃತಿ ಮಾಸಾಚರಣೆ ನಡೆಸುತ್ತಿದೆ. ಅಂದು ಬೆಳಗ್ಗೆ 10ಕ್ಕೆ ನಿಗಮದ ಗುಲ್ಬರ್ಗ ಕಚೇರಿಯಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದ್ದು, ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಬಿ. ಗುಂಜೀಗಾವಿ ಮಾಸಾಚರಣೆಯನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ, ಆಕಾಶವಾಣಿ ಕೇಂದ್ರದ ಮುಖ್ಯಸ್ಥೆ ಅಂಜನಾ ಯಾತನೂರ ಪಾಲ್ಗೊಳ್ಳುವರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನೌಕರರ ಸಂಘದ ಉಪಾಧ್ಯಕ್ಷ ರೇವಣಸಿದ್ದಪ್ಪ ಹಾಗರಗಿ, ಕರ್ನಾಟಕ ವಿದ್ಯುತ್ ಮಂಡಳಿ ಎಂಜನಿಯರುಗಳ ಸಂಘದ ಉಪಾಧ್ಯಕ್ಷ ಮೋಹನ್ ಪಾಲ್ಗೊಳ್ಳುವರು ಎಂದು ಜೆಸ್ಕಾ ವ್ಯವಸ್ಥಾಪಕ ನಿರ್ದೇಶಕಿ ಪಲ್ಲವಿ ಆಕುರಾತಿ ತಿಳಿಸಿದ್ದಾರೆ.
23ರಂದು ಉಪನ್ಯಾಸ
ಗುಲ್ಬರ್ಗ: ಹುಬ್ಬಳ್ಳಿಯ ಖ್ಯಾತ ಮನೊರೋಗ ತಜ್ಞರಾದ ಡಾ.ಕೆ.ಪಾಂಡುರಂಗ ಅವರಿಂದ ಜ. 23ರಂದು 12 ಗಂಟೆಗೆ ರಾವೂರ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಎಂದು ಆಡಳಿತಾಧಿಕಾರಿ ಡಾ.ಗುಂಡಣ್ಣಾ ಬಾಳಿ ತಿಳಿಸಿದ್ದಾರೆ. ಉಪನ್ಯಾಸದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಎಂದು ಹೇಳಿದ್ದಾರೆ.
ಅತ್ತುತ್ತಮ ಶಿಕ್ಷಕ ಪ್ರಶಸ್ತಿಗೆ ಹರ್ಷ: ರಾವೂರ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಸಚ್ಚಿದಾನಂದ ಕಾಲೇಜಿನ ಪ್ರಾಚಾರ್ಯ ಕಾಂತಪ್ಪ ಬಡಗೇರ ಅವರಿಗೆ ಅತ್ತುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಕಾಗಿ ಸಂಸ್ಥೆ ಆಡಳಿತಾಧಿಕಾರಿ ಡಾ. ಗುಂಡಣ್ಣಾ ಬಾಳಿ, ಸಿದ್ದಲಿಂಗೇಶ್ವರ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಹರ್ಷ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಗುಟ್ಟು ಆನ್‌ಲೈನ್‌ನಲ್ಲಿ ರಟ್ಟು
ಆಡಳಿತದಲ್ಲಿ ಕಣ್ಣಿಗೆ ಕಾಣುವ ಬದಲಾವಣೆ ತರುವುದಾಗಿ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆ ನಿಟ್ಟಿನಲ್ಲಿ ಕಡತಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಅದರಂತೆ ಶೇ.50ಕ್ಕಿಂತ ಹೆಚ್ಚು ಕಡತಗಳು ಬಾಕಿ ಇರುವ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಲು ಕೂಡ ನಿರ್ಧರಿಸಿದೆ. ಅದರಂತೆ ಕಾರ್ಯದರ್ಶಿಗಳು ತಮ್ಮ ಕೆಳ ಹಂತದ ಅಧಿಕಾರಿಗಳಿಗೆ ಕಡತಗಳ ತ್ವರಿತ ವಿಲೇವಾರಿಗೆ ನಿರ್ದೇಶನ ಹೊರಡಿಸಿದ್ದಾರೆ. ಇದುವರೆಗೆ ಬೆಚ್ಚಗೆ ಕೂತು ಈಗ ಇದ್ದಕ್ಕಿದ್ದಂತೆ ಎದ್ದು ಕೆಲಸ ಮಾಡುವುದು ಕೆಲವರಿಗೆ ಕಷ್ಟವಾಗದೇ ಇರುತ್ತದೆಯೇ? ಆದರೂ ಕೆಲಸ ಆಗಿದೆ ಎಂದು ತೋರಿಸಲೇ ಬೇಕು. ಅದಕ್ಕೆ ಕೆಲವು ಜಿಲ್ಲೆಗಳ ಅಧಿಕಾರಿಗಳು ಏನೇನೋ ದಾರಿ ಹುಡುಕುತ್ತಿದ್ದಾರೆ. ಮೊನ್ನೆ ನಡೆದ ಅಧಿಕಾರಿಗಳ ಸಭೆ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕಂಡುಕೊಂಡಿರುವ ಹೊಸ ದಾರಿಯನ್ನು ಕಂದಾಯ ಇಲಾಖೆ ಕಾರ್ಯದರ್ಶಿ ಪತ್ತೆ ಮಾಡಿದರು. ಕಡತ ವಿಲೇವಾರಿ ಕುರಿತು ಅಧಿಕಾರಿಗಳು ಕೊಡುವ ಮಾಹಿತಿಗೂ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಗೂ ತಾಳೆಯಾಗುತ್ತಿರಲಿಲ್ಲ. ಅಧಿಕಾರಿಗಳು ಕೊಟ್ಟ ಪ್ರಮಾಣದಷ್ಟು ಕಡತ ವಿಲೇವಾರಿಯಾಗಿಲ್ಲ ಎಂಬುದನ್ನು ಆನ್‌ಲೈನ್ ಮಾಹಿತಿ ಹೇಳುತ್ತಿತ್ತು. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದರು. ಆಡಳಿತದಲ್ಲಿ ಆಗಿರುವ ಈ ಬದಲಾವಣೆಯಾದರೂ ಕಣ್ಣಿಗೆ ಕಂಡಿತಲ್ಲಾ ಎಂದು ಅವರು ಹೇಳಿದಾಗ ಜಿಲ್ಲಾ ಮಟ್ಟದ ಅಧಿಕಾರಿಗಳು ತಲೆ ಕೆಳಗೆ ಹಾಕಿ ಕುಳಿತರು.
ಟಚಿಂಗ್ ಸ್ಟಾರ್ ಈಸ್ ಮಿಸ್ಸಿಂಗ್
ಶಿವಮೊಗ್ಗದಲ್ಲಿ ಒಬ್ಬ ರಾಜಕೀಯ ನಾಯಕರಿದ್ದಾರೆ. ಅವರು ನಮ್ಮ ಪಕ್ಷದ ಮುಖಂಡರಲ್ಲವೇ ಅಲ್ಲ ಎಂದು 'ಕೈ' ಪಕ್ಷದ ಜಿಲ್ಲಾಧ್ಯಕ್ಷರೇ ಸ್ಪಷ್ಟಪಡಿಸಿದ್ದಾಗಿದೆ. ಆದರೂ, ತಾವು ಕಾಂಗ್ರೆಸ್ ಮುಖಂಡ ಎಂದು ಓಡಾಡುವ ಇವರಿಗೆ 'ಟಚಿಂಗ್ ಸ್ಟಾರ್' ಎಂಬ ಅಡ್ಡ ಹೆಸರೂ ಇದೆ. ಏಕೆಂದ್ರೆ, ಸಾರ್ವಜನಿಕವಾಗಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ಇವರು ಕಾಣ ಸಿಗುತ್ತಾರೆ. ಆಹ್ವಾನವಿಲ್ಲದಿದ್ದರೂ ವೇದಿಕೆ ಏರುವ ಹಂಬಲ. ಶ್ವೇತವಸ್ತ್ರಧಾರಿಗಳಾಗಿ ತಿರುಗುವ ಈ ವ್ಯಕ್ತಿ ಅಕ್ಕಪಕ್ಕ ಇಬ್ಬರು ಹೊಗಳುಭಟ್ಟರೂ ಇರುತ್ತಾರೆ. ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ತಮ್ಮ ಸಫಾರಿ ವಾಹನ ಏರಿ ನಗರ ಸುತ್ತುವ ಈ ಸ್ಟಾರ್ ಪ್ರತಿಭಟನೆಗೂ ಹೋಗ್ತಾರೆ, ಶಾಲಾ ವಾರ್ಷಿಕೋತ್ಸವವನ್ನೂ ಬಿಡಲ್ಲ. ಮಾಧ್ಯಮದ ಕ್ಯಾಮೆರಾ ಎಲ್ಲೆಲ್ಲಿ ಕಾಣುತ್ತದೋ ಅಲ್ಲಿ ಈ ಮುಖ ಅರಳಿಸಿಕೊಳ್ಳುತ್ತಾರೆ. 'ನಾನು ಆ ಪ್ರೋಗ್ರಾಂ ಟಚ್ ಮಾಡಿ ಬಂದೆ ಸಾರ್. ಮತ್ತೊಂದು ಕಡೆ ಹೊರಟಿದ್ದೀನಿ' ಎಂದು ಬಡಬಡಿಸುತ್ತಲೇ ಇರುತ್ತಾರೆ. ಈ ಶಿಖಾಮಣಿ ಮುಂಬರುವ ಲೋಕಸಭಾ ಚುನಾವಣೆಗೆ 'ನಾನೇ ಅಭ್ಯರ್ಥಿ. ಹೈಕಮಾಂಡ್ ನನಗೇ ಟಿಕೆಟ್ ನೀಡಲು ಒಪ್ಪಿದೆ' ಎಂದೂ ಹೇಳಿಕೊಂಡು ತಿರುಗುತ್ತಿದ್ದಾರೆ. 'ಕೈ' ಕಾರ್ಯಕರ್ತರು, ಮುಖಂಡರು ಮಾತ್ರ ಇವರ ಟಚಿಂಗ್ 'ಡೈಲಾಗ್' ಕೇಳಿ ಮುಸಿಮುಸಿ ನಗುತ್ತಾರೆ. ಸದ್ಯ ನಾಪತ್ತೆಯಾಗಿರುವ ಇವರು ಲೋಕಸಭೆ ಟಿಕೆಟ್‌ಗಾಗಿ ಹೈಕಮಾಂಡ್ ಅನ್ನು ಟಚ್ ಮಾಡಲು ಹೋಗಿರಬಹುದು ಎಂದು ಕಾಂಗ್ರೆಸ್ ಮುಖಂಡರೊಬ್ಬರು ವ್ಯಂಗ್ಯವಾಡಿದ್ದಾರೆ.