ಅಗಲವಾಗದ ರಸ್ತೆ; ಚರಂಡಿಗಿಳಿದ ಬಸ್
ಮುದಗಲ್: ರಾಯಚೂರು- ಬೆಳಗಾವಿ ರಾಜ್ಯ ಹೆದ್ದಾರಿ ಇಕ್ಕಟ್ಟಾಗಿದ್ದರಿಂದ ಲಿಂಗಸ್ಗೂರು ರಸ್ತೆಗೆ ಹೊಂದಿಕೊಂಡ ಏಕ್ ಮಿನಾರ್ ಮಸೀದಿಗೆ ಹೊಂದಿಕೊಂಡಿರುವ ಚರಂಡಿಗೆ ಬಸ್ಸೊಂದು ನುಗ್ಗಿದ್ದರಿಂದ ಭಾರಿ ಅನಾಹುತ ತಪ್ಪಿದೆ.
ಪಟ್ಟಣದಲ್ಲಿ ರಾಜ್ಯ ಹೆದ್ದಾರಿಯ ಏಕ್ ಮಿನಾರ್ ಮಸೀದಿ ಮುಂದೆ ಲಾರಿಯೊಂದು ಪಂಚರ್ ಆಗಿ ದುರಸ್ತಿಗಾಗಿ ನಿಂತಿತ್ತು. ಅದನ್ನು ಕಂಡ ಎನ್ಇಕೆಎಸ್ಆರ್ಟಿಸಿ ಗುಲ್ಬರ್ಗ ಘಟಕದ ಬಸ್ಸೊಂದು ಲಿಂಗಸ್ಗೂರು ಕಡೆಗೆ ಚಲಿಸುತ್ತಿರುವಾಗ ಎದುರಿನಿಂದ ಮತ್ತೊಂದು ಲಾರಿ ಬಂದಿತು. ಚರಂಡಿಯ ಮೇಲಿನ ಕಲ್ಲಿನ ಮೇಲಿಂದ ಬಸ್ನ್ನು ಚಲಿಸುವಂತೆ ಮಾಡುವ ಸಮಯದಲ್ಲಿ ಚರಂಡಿ ಮೇಲಿನ ಬಂಡೆಗಲ್ಲು ಕುಸಿದು ಬಿದ್ದಿತು. ಇದರಿಂದ ಬಸ್ನ ಮುಂದಿನ ಗಾಲಿ ಚರಂಡಿಯಲ್ಲಿ ಕುಸಿದಿದ್ದರಿಂದ ಮಸೀದಿಗೆ ಯಾವುದೇ ರೀತಿ ಹಾನಿಯಾಗದೇ ಇರುವುದರಿಂದ ಭಾರಿ ಅನಾಹುತ ತಪ್ಪಿದೆ.
ಒಂದು ವೇಳೆ ನಿಯಂತ್ರಣ ತಪ್ಪಿ ಮಸ್ಜೀದ್ ಒಳಗಡೆ ನುಗ್ಗಿದ್ದರೆ ಒಳಗಡೆ ಪ್ರಾರ್ಥನೆ ಸಲ್ಲಿಸುವ ನಾಗರಿಕರಿಗೆ ಭಾರಿ ಅನಾಹುತವಾಗಿ ತಪ್ಪಿದಂತಾಗಿದೆ. ರಾಜ್ಯದಾದ್ಯಂತ ಸುಪ್ರೀಂ ನ್ಯಾಯಾಲಯದ ಆದೇಶದನ್ವಯ ಹೆದ್ದಾರಿ ಅಗಲೀಕರಣದಂತೆ ಪಟ್ಟಣದಲ್ಲಿ ರಾಜ್ಯ ಹೆದ್ದಾರಿಯನ್ನು ಅಗಲೀಕರಣಗೊಳಿಸಿ ಮೂರು ವರ್ಷ ಕಳೆದರೂ ತೆರವುಗೊಳಿಸಿದ ಕಟ್ಟಡಗಳ ತ್ಯಾಜ್ಯ ವಸ್ತುಗಳು ಹಾಗೆಯೇ ಉಳಿದಿವೆ. ತೆರವುಗೊಳಿಸಿ ಕಟ್ಟಡಗಳ ಮಾಲೀಕರು ಅಧಿಕಾರಿಗಳನ್ನು ಶಪಿಸುವಂತಾಗಿದೆ. ರಸ್ತೆಯ ಇಕ್ಕಟ್ಟಿನಿಂದ ಮೇಲಿಂದ ಮೇಲೆ ಅಪಘಾತ ಸಂಭವಿಸುತ್ತಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ನಾಗರಿಕರನ್ನು ಚಿಂತೆಗೀಡುಮಾಡಿದೆ.