ಆರೋಪಿಗಳ ಪತ್ತೆಗೆ ಪೊಲೀಸರ ಜಾಲ
ಶಹಾಪುರ: ತಾಲೂಕಿನ ಕನ್ಯಾಕೋಳೂರ ಗ್ರಾಮದಲ್ಲಿ ಇತ್ತೀಚಿಗೆ ನಡೆದ ದಲಿತ ಮುಖಂಡನ ಕೊಲೆ ಘಟನೆಯಿಂದ ಇಡೀ ಗ್ರಾಮ ಇನ್ನು ಆತಂಕದಿಂದ ಹೊರಬಂದಿಲ್ಲ. ಒಂದಡೆ ಪೊಲೀಸ್ ಇಲಾಖೆ ಆರೋಪಿಗಳ ಪತ್ತೆಗಾಗಿ ಗ್ರಾಮದಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಗಾಬರಿಯಿಂದಲೇ ಹಲವು ಕುಟುಂಬಗಳು ಮನೆಗೆ ಬೀಗ ಜಡಿದು ಬೇರೆಡೆ ಹೋಗಿದ್ದಾರೆ. ವಾತಾವರಣ ಸ್ವಲ್ಪ ಮಟ್ಟಿಗೆ ತಿಳಿಯಾಗಿದ್ದರೂ, ಗ್ರಾಮ ಮಾತ್ರ ಖಾಲಿಯಾದ ವಾತಾವರಣ ನಿರ್ಮಾಣವಾಗಿದೆ.
ಶಾಲೆಗಳಲ್ಲಿ ಹಾಜರಾತಿ ಕಡಿಮೆ: ಗ್ರಾಮದಲ್ಲಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಗಣನೀಯವಾಗಿ ಹಾಜರಾತಿ ಇಳಿಮುಖವಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಉತ್ಸಾಹವಿಲ್ಲದಂತಾಗಿದೆ. ಈ ಕುರಿತು ಸ್ಥಳೀಯ ಸರ್ಕಾರಿ ಪ್ರೌಢಶಾಲೆ ಮುಖ್ಯಗುರುಗಳನ್ನು ವಿಚಾರಿಸಿದಾಗ ಗ್ರಾಮದಲ್ಲಿ ನಡೆದ ಕಹಿ ಘಟನೆಯಿಂದ ಶಾಲೆಗಳ ಮೇಲೆ ಪರಿಣಾಮ ಬೀರಿದ್ದು, ವಿಶೇಷವಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬಗ್ಗೆ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಸಾಧ್ಯವಾದಷ್ಟೂ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಮನವೊಲಿಸುತ್ತಿದ್ದೇವೆ ಎಂದು ತಿಳಿಸಿದರು.
ಬೀಗ ಜಡಿದ ಗ್ರಾಪಂ ಕಚೇರಿ: ಸ್ಥಳೀಯ ಗ್ರಾಪಂ ಕಚೇರಿಗೆ ಬೀಗ ಜಡಿದು, ಎಲ್ಲಾ ಕಾರ್ಯಗಳಿಗೆ ಅಡತಡೆಯಾಗಿದ್ದು ಕಂಡುಬರುತ್ತಿದೆ. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಗ್ರಾಮಸ್ಥರಲ್ಲಿ ಆತಂಕ ದೂರಮಾಡಿ ವಿಶ್ವಾಸ ಮರುಕಳಿಸುವಂತೆ ಮಾಡುವಲ್ಲಿಪ್ರಯತ್ನ ಅನಿವಾರ್ಯ.