74 ಲಕ್ಷ ಉಳಿತಾಯ ಬಜೆಟ್ ಮಂಡನೆ
ಕನ್ನಡಪ್ರಭ ವಾರ್ತೆ ಚಿತ್ತಾಪುರ ಜ.22
ಸ್ಥಳೀಯ ಎಪಿಎಂಸಿ ಅಭಿವೃದ್ಧಿಗಾಗಿ 2014- 15ನೇ ಸಾಲಿನ ಅಂದಾಜು ವಾರ್ಷಿಕ ಮುಂಗಡ ಪತ್ರದಲ್ಲಿ 1,75,53,305 ಮೊತ್ತದ ಕ್ರಿಯಾಯೋಜನೆಗೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಎಪಿಎಂಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ ಅಭಿವೃದ್ಧಿ ಕುರಿತು ವಿವರಿಸಿದರು. 1 ಕೋಟಿ ವಾರ್ಷಿಕ ಅಂದಾಜು ವೆಚ್ಚವಾಗಲಿದ್ದು, 74 ಲಕ್ಷ ಉಳಿತಾಯವಾಗಲಿರುವ ಮುಂಗಡ ಪತ್ರಕ್ಕೆ ಎಲ್ಲ ಸದಸ್ಯರು ಸಮ್ಮತಿಸಿದರು.
ಯಾವ್ಯಾವ ಅಭಿವೃದ್ಧಿ ಕಾಮಗಾರಿ?: ವಾಡಿ ಉಪ ಮಾರುಕಟ್ಟೆ ಪ್ರಾಂಗಾಣದಲ್ಲಿ 4.75 ಲಕ್ಷ ವೆಚ್ಚದಲ್ಲಿ ವಿದ್ಯುದ್ದೀಕರಣ ಕಾಮಗಾರಿ ಕೈಗೊಳ್ಳಲು ನಿರ್ಣಯಿಸಲಾಯಿತು. 2014- 15ನೇ ಸಾಲಿನ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸಮಿತಿ ನಿಧಿಯಿಂದ 85 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.
ಚಿತ್ತಾಪುರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 64.32 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ, 10 ಚಿಕ್ಕ ಮಳಿಗೆ ನಿರ್ಮಾಣ, ಗೇಟ್ ಹತ್ತಿರ ಚೆಕ್ ಪೋಸ್ಟ್ ನಿರ್ಮಾಣ ಹಾಗೂ ಕಚೇರಿ ಎದುರು ಉದ್ಯಾನವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಉಪಾಹಾರ ಗೃಹ ನಿರ್ಮಾಣ, ವಾಡಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಪೌಂಡ ನಿರ್ಮಾಣ ಹಾಗೂ ನಾಲವಾರ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಹಳ್ಳಕ್ಕೆ ತಡೆ ಗೋಡೆ ನಿರ್ಮಾಣ ಕಾಮಗಾರಿಗಳನ್ನು 71 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅಧ್ಯಕ್ಷ ಶಿವಯೋಗಿ ಸಾಹು ಗುಂಡಗುರ್ತಿ ಹೇಳಿದರು.
ಡಿಸೆಂಬರ್ ತಿಂಗಳ ಜಮಾ- ಖರ್ಚುಗಳ ಕುರಿತು ಪರಿಶೀಲಿಸಲಾಯಿತು. ಉಪಾಧ್ಯಕ್ಷ ಸಂತೋಷ ಚಾಮನೂರ, ಸದಸ್ಯರಾದ ಡಾ. ಪ್ರಭುರಾಜ ಕಾಂತಾ, ವಿಜಯಕುಮಾರ ರಾಠೋಡ, ಶರಣಬಸಪ್ಪ ಯದಲಾಪುರ, ಶಿವರಾಜ ಪಾಟೀಲ್, ನರಸಿಂಗರಾವ ಕುಲಕರ್ಣಿ, ಶಂಕ್ರಯ್ಯ ಶರಣಯ್ಯ, ಮಲ್ಲಿನಾಥಗೌಡ ಸನ್ನತಿ, ಶಕುಂತಲಾಬಾಯಿ, ಕಾರ್ಯದರ್ಶಿ ಹಾಗೂ ಪ್ರಭಾರ ಸಹಾಯಕ ನಿರ್ದೇಶಕ ಶಿವಶಂಕರ ನನ್ನಾ ಇದ್ದರು.