ಶಿವಶರಣರ ಸರಳ ಕಥೆಗಳು ಜನರಿಗೆ ತಲುಪಬೇಕು: ಪಟ್ಟೇದಾರ
ಯಾದಗಿರಿ: 12ನೇ ಶತಮಾನದಲ್ಲಿ ಶಿವಶರಣರು ಆಡಿದ ವಚನ ಸಾಹಿತ್ಯ ಭಾಷೆಗೂ, ಪ್ರಸ್ತುತ ಭಾಷೆಗೂ ವ್ಯತ್ಯಾಸವಿದ್ದು ಶರಣರ ವಚನಗಳು ಗೂಡಾರ್ಥಗಳಿಂದ ಕೂಡಿವೆ. ಶಿವಶರಣರ ಸರಳ ರೂಪದ ಕಥೆಗಳು ಜನರಿಗೆ ತಲುಪಬೇಕಾಗಿದೆ ಎಂದು ಸಿ. ಎಂ. ಪಟ್ಟೇದಾರ ಹೇಳಿದ್ದಾರೆ.
ನಗರದ ಗಂಗಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಲೋಕಾರ್ಪಣೆಯಾದ ಯಮನೂರೇಶ ಬಿರಾದಾರ ಅವರ 'ಅಂಬಿಗರ ಚೌಡಯ್ಯನ ವಚನಸಾರ' ಕೃತಿ ಕುರಿತು ಅವರು ಮಾತನಾಡುತ್ತಿದ್ದರು.
ಚೌಡಯ್ಯನವರ ವಚನಗಳು ಕಠಿಣ ಭಾಷೆಯಲ್ಲಿವೆ. ನೇರ, ನಿಷ್ಠುರ ಮತ್ತು ಬಂಡಾಯದ ವಿಚಾರಗಳು ವಚನಗಳಲ್ಲಿ ಎದ್ದು ಕಾಣುತ್ತವೆ. ಹೀಗಾಗಿ ಅನೇಕರು ಚೌಡಯ್ಯನವರ ವಚನಗಳನ್ನ ಅನುಸರಿಸುವಲ್ಲಿ ಹಿಂದೇಟು ಹಾಕುತ್ತಾರೆ. ಬಿರಾದಾರ ಅವರ ಕೃತಿ ಅರ್ಥ ಮತ್ತು ಭಾವಾರ್ಥಗಳನ್ನು ಒಳಗೊಂಡಿದ್ದು ಸಾಮಾನ್ಯ ಓದುಗರಿಗೂ ಮುಟ್ಟಿಸುವ ಪ್ರಯತ್ನ ಕೃತಿಯಲ್ಲಿದೆ ಎಂದರು.
ಪ್ರಕಾಶಕ ದೇವಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಜಿಲ್ಲಾ ಕೋಲಿ ಸಮಾಜದ ಅಧ್ಯಕ್ಷ ಮೌಲಾಲಿ ಅನಪೂರ, ಸಮಾಜದ ಉಪಾಧ್ಯಕ್ಷ ಮಾನಪ್ಪ ಸೂಗೂರ, ಜಿ.ಪಂ. ಉಪಾಧ್ಯಕ್ಷೆ ಚನ್ನಬಸಮ್ಮ ಶರಣಪ್ಪ ಸೋಮಣ್ಣೋರ್, ನಗರ ಸಭೆ ಉಪಾಧ್ಯಕ್ಷೆ ರಾಚಮ್ಮ ಮೌಲಾಲಿ ಅನಪೂರ, ಕೋಲಿ ಸಮಾಜದ ತಾಲೂಕ ಅಧ್ಯಕ್ಷ ಸಣ್ಣ ಹನುಮಂತಪ್ಪ ಬಳಿ ಇದ್ದರು. ಬಸವರಾಜ ಚಂಡ್ರಿಕಿ ನಿರೂಪಿಸಿ ವಂದಿಸಿದರು.