ಅಂತರ್ ಕಾಲೇಜು ಯುವಜನೋತ್ಸವ
ಶಹಾಪುರ: ಭೀಮರಾಯನಗುಡಿಯ ಕೃಷಿ ಕಾಲೇಜಲ್ಲಿ ಜ.24ರಿಂದ ಎರಡು ದಿನಗಳ ಅಂತರ ಕಾಲೇಜು ಯುವಜನೋತ್ಸವ ನಡೆಯಲಿದೆ ಎಂದು ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಗಿರಡ್ಡಿ ತಿಳಿಸಿದ್ದಾರೆ. ರಾಯಚೂರಿನ ಕೃವಿವಿ ಅಡಿಯಲ್ಲಿ 5ನೇ ಅಂತರ್ಕಾಲೇಜು ಯುವಜನೋತ್ಸವದಲ್ಲಿ ರಾಯಚೂರಿನ ಕೃಷಿ ಕಾಲೇಜು, ಕೃಷಿ ತಾಂತ್ರಿಕ ಕಾಲೇಜು, ಕೃಷಿ ಸ್ನಾತಕೋತ್ತರ ಕಾಲೇಜು, ಭೀಮರಾಯನಗುಡಿ ಕೃಷಿ ಕಾಲೇಜು, ಮತ್ತು ಗುಲ್ಬರ್ಗದ ಕೃಷಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. 24ರಂದು ಗುಲ್ಬರ್ಗದ ಸಮುದಾಯ ಮಹಿಳಾ ಮಹಾವಿದ್ಯಾಲಯದ ನಿರ್ದೇಶಕಿ ಡಾ. ಉಷಾ ಶರ್ಮಾ ಪಾಟೀಲ ಉದ್ಘಾಟನೆ ನೆರವೇರಿಸುವರು. 24ರಂದು ವಿದ್ಯಾರ್ಥಿಗಳಿಂದ ವ್ಯಂಗ್ಯಚಿತ್ರ ರಚನೆ, ಸಮೂಹ ಗಾಯನ, ದೇಶಭಕ್ತಿ ಗೀತೆ, ಜನಪದ ಗೀತೆ, ಭಿತ್ತಿ ಚಿತ್ರ, ರಸ ಪ್ರಶ್ನೆ, ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು, ಮಣ್ಣಿನಿಂದ ಆಕೃತಿ ತಯಾರಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 25ರಂದು ರಂಗೋಲಿ ಬಿಡಿಸುವುದು, ಭಾಷಣ, ಆಶು ಭಾಷಣ, ಪ್ರಹಸನ, ಮೂಕಾಭಿನಯ, ಏಕಪಾತ್ರಾಭಿನಯ, ಜಾನಪದ ನೃತ್ಯ ಸ್ಪರ್ಧೆಗಳನ್ನು ನಡೆಸಲಾಗುವುದು. ರಾಯಚೂರು ಕೃವಿವಿ ಕುಲಪತಿ ಡಾ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.