'ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ'
ಗುಲ್ಬರ್ಗ: ಇಲ್ಲಿನ ಆಕಾಶವಾಣಿ ಪ್ರಸಾರ ಮಾಡುತ್ತಿರುವ ಯಶಸ್ವಿ ಎಸ್ಸೆಸ್ಸೆಲ್ಸಿ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಹಾಗೂ ಅಂಕಣಕಾರ ಗುರುರಾಜ ಕರ್ಜಗಿಯವರು ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಜಗತ್ತನ್ನೇ ಗೆದ್ದ ಚಕ್ರವರ್ತಿ ಅಲೆಕ್ಸಾಂಡರ್ನ ಕಥೆಯನ್ನು ಹೇಳುವುದರ ಮೂಲಕ ವಿದ್ಯಾರ್ಥಿಗಳು ಸಹ ತಮ್ಮ ಜೀವನದ ಅತ್ಯಂತ ಮಹತ್ವದ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಧೈರ್ಯದಿಂದ ಆತ್ಮವಿಶ್ವಾಸದಿಂದ ಎದುರಿಸಿ ಕೀರ್ತಿ ತರುವಂತೆ ತಮ್ಮೊಂದಿಗೆ ಸಂವಾದಿಸಿದ ಮಕ್ಕಳನ್ನು ಉದ್ದೇಶಿಸಿ ಹೇಳುತ್ತ ಮಕ್ಕಳ ಮನಸ್ಸನ್ನು ಅರಳಿಸಿದರು.
ಇದೇ ನೇರ ಫೋನ-ಇನ್ ಕಾರ್ಯಕ್ರಮದಲ್ಲಿ ಬೀದರ ಜಿಲ್ಲೆ ಭಾಲ್ಕಿ ಹೀರೆಮಠದ ಡಾ. ಬಸವಲಿಂಗ ಪಟ್ಟದ್ದೇವರು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವಂತೆ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಹೇಗೆ ಓದಬೇಕು, ಪರೀಕ್ಷೆಗೆ ಯಾವ ರೀತಿ ತಯಾರಿ ಮಾಡಬೇಕು, ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಬಗೆ ಹೇಗೆ ಎನ್ನುವುದನ್ನು ಮನಮುಟ್ಟುವಂತೆ ತಿಳಿಸಿಕೊಟ್ಟರು. ತಾಯಿ-ತಂದೆ ಹೆಮ್ಮೆ ಪಟ್ಟುಕೊಳ್ಳುವಂತೆ, ನಮ್ಮ ಪ್ರದೇಶಕ್ಕೆ ಕೀರ್ತಿ ತರುವಂತೆ ಹೆಚ್ಚು ಅಂಕ ಪಡೆಯುವದರ ಮೂಲಕ ಯಶಸ್ವಿಗೊಳಿಸುವಂತೆ ಕಿವಿಮಾತು ಹೇಳಿದರು.
ಗುಲ್ಬರ್ಗ ಮತ್ತು ಯಾದಗಿರಿ ಜಿಲ್ಲೆಗಳ ಸರಿಸುಮಾರು 30 ಸಾವಿರ ವಿದ್ಯಾರ್ಥಿಗಳ ಓದಿಗೆ ಮತ್ತು ಪರೀಕ್ಷಾ ತಯಾರಿಗೆ ಅನುಕೂಲವಾಗುವ ಜನಪ್ರೀಯ ಕಾರ್ಯಕ್ರಮಕ್ಕೆ ತಡೆರಹಿತ ವಿದ್ಯುತ್ ಸರಬರಾಜು ಮಾಡುವಂತೆ ಮಾಡಿದ ಮನವಿಯನ್ನು ಸ್ಥಳೀಯ ಜೆಸ್ಕಾಂ ಅಧಿಕಾರಿಗಳು ಪುರಸ್ಕರಿಸಿದ್ದು ಕಾರ್ಯಕ್ರಮ ಪ್ರಸಾರದ ವೇಳೆ ವಿದ್ಯುತ್ ಯಾವ ಕಾರಣಕ್ಕೂ ಹೋಗದಂತೆ ವ್ಯವಸ್ಥೆ ಮಾಡಿದ್ದಾರೆಂದು ಗುಲ್ಬರ್ಗ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥೆ ಅಂಜನಾ ಯಾತನೂರ್ ಹೇಳಿದ್ದಾರೆ.