ಗಾಯಕ ಯಶವಂತ ಹಳಿಬಂಡಿ ನಿಧನಕ್ಕೆ ಕನ್ನಳ್ಳಿ ಸಂತಾಪ
ಗುರುಮಠಕಲ್: ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ತಮ್ಮ ಹಾಡುಗಳಲ್ಲಿ ತರುವುದರೊಂದಿಗೆ ನಾಡಿನೆಲ್ಲೆಡೆ ಚಿರಪರಿಚಿತರಾಗಿದ್ದ ನಾಡಿನ ಹೆಸರಾಂತ ಗಾಯಕ ಹಾಗೂ ಸುಗಮ ಸಂಗೀತದ ಮೇರು ಗಾಯಕ ಯಶವಂತ ಹಳಿಬಂಡಿ ನಿಧನಕ್ಕೆ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಸಂತಾಪ ಸೂಚಿಸಿದ್ದಾರೆ.
ವರಕವಿ ದ.ರಾ. ಬೇಂದ್ರೆಯವರ ಅನೇಕ ಗೀತೆಗಳಿಗೆ ಜೀವ ತುಂಬಿದ್ದ ಹಳಿಬಂಡಿ ಧಾರವಾಡದ ಶೈಲಿಯಲ್ಲಿ ಹಾಡುವುದರ ಮೂಲಕ ಮನೆಮಾತಾಗಿದ್ದರು. ಪಾತರಗಿತ್ತಿ ಪಕ್ಕಾ, ಕುರುಡು ಕಾಂಚಾಣ ಕುಣಿಯುತಲಿತ್ತು, ಕೋಡಗನ ಕೋಳಿ ನುಂಗಿತ್ತ, ಅಳಬೇಡ ತಂಗಿ ಎಂಬ ಅನೇಕ ಗೀತೆಗಳ ಮೂಲಕ ಕನ್ನಡಿಗರ ಜನಮನ ಗೆದ್ದಿದ್ದ ಹಳಿಬಂಡಿ ಉತ್ತಮ ಗಾಯಕ ಸಂಗೀತ ಸಂಯೋಜಕ ಹಾಗೂ ಸಂಗೀತ ನಿರ್ದೇಶಕರಾಗಿದ್ದರು. ಜೊತೆಗೆ ಚಿತ್ರಕಲೆಯನ್ನು ಅಭ್ಯಾಸಿಸಿದ್ದರು. ಇಂದು ಅವರ ನಿಧನದಿಂದ ಸಂಗೀತಲೋಕಕ್ಕೆ ಭರಿಸಲಾರದ ನಷ್ಟವಾಗಿದೆ ಎಂದು ಅಂಗಡಿ ಅಭಿಪ್ರಾಯ ಪಟ್ಟಿದ್ದಾರೆ.