ಬಿಜೆಪಿ ಸೇರ್ಪಡೆಗೆ ವಿರೂಪಾಕ್ಷಪ್ಪಗೆ ಬೆಂಬಲಿಗರ ಸಮ್ಮತಿ
ಸಿಂಧನೂರು: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪನವರು ಬಿಜೆಪಿ ಸೇರಲು ಅವರ ಅಭಿಮಾನಿಗಳು, ಕಾರ್ಯಕರ್ತರು ಸಮ್ಮತಿಸಿದ್ದಾರೆ. ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಕೆ.ವಿರೂಪಾಕ್ಷಪ್ಪನವರು ರಾಜಕೀಯ ನಡೆ ಕುರಿತು ಕರೆದಿದ್ದ ಅಭಿಮಾನಿಗಳ ಆಪ್ತ ಸಮಾಲೋಚನೆಯಲ್ಲಿ ಕೊಪ್ಪಳ, ಮಸ್ಕಿ, ಸಿಂಧನೂರು, ಯಲಬುರ್ಗಾ, ಗಂಗಾವತಿ, ಕನಕಗಿರಿ, ಸಿರುಗುಪ್ಪ ಮುಂತಾದ ತಾಲೂಕಿನಿಂದ ಬಂದಿದ್ದ ನೂರಾರು ಕಾರ್ಯಕರ್ತರು ಒಮ್ಮತದಿಂದ ಬಿಜೆಪಿ ಸೇರಲು ಒಪ್ಪಿಗೆ ಸೂಚಿಸಿದರು. ಮುಖಂಡರಾದ ಬಾಬರಪಾಷ ಮಾತನಾಡಿ, ಕೆ.ವಿರೂಪಾಕ್ಷಪ್ಪನವರು ಮತ್ತು ಕೊಂತನೂರು ಕುಟುಂಬ ರಾಜಕೀಯದಲ್ಲಿದ್ದರೆ ಒಂದು ಶಕ್ತಿಯಾಗಿ ನಮಗೆಲ್ಲಾ ಆಸರೆಯಾಗುತ್ತದೆ. ಬಿಜೆಪಿಗೆ ಹೋಗಲಿ, ಆದರೆ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕು. ಇಲ್ಲವೆ ತಕ್ಕ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಸದಾ ಬೆಂಬಲ: ಅಬ್ದುಲ್ಗನಿ ಸಾಬ್ ವಕೀಲ, ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಮಾತನಾಡಿ, ನೀವು ಎಲ್ಲಿಯೇ ಹೋಗಿ ನಾವು ನಿಮ್ಮ ಜೊತೆ ಸದಾ ಇರುತ್ತೇವೆ. ನಿಮ್ಮ ನಡೆಯಲ್ಲಿ ನಾವು ನಡೆಯುತ್ತೇವೆ. ನಮಗೆ ಪಕ್ಷಕ್ಕಿಂತ ನೀವು ಮುಖ್ಯ. ಬಿಜೆಪಿ ತಕ್ಕದಾದ ಸ್ಥಾನ ನೀಡಲಿ. ಕೊಪ್ಪಳ ಟಿಕೆಟ್ ನೀಡಿದರೆ ಗೆಲ್ಲಿಸುವ ಗುರುತರ ಹೊಣೆಗಾರಿಕೆ ನಮ್ಮ ಮೇಲಿರಲಿ ಎಂದು ತಿಳಿಸಿದರು. ಮಾಜಿ ಸಂಸದ ವಿರೂಪಾಕ್ಷಪ್ಪ ಮಾತನಾಡಿ, ನಾನು ಈಗಾಗಲೇ ಕಾಂಗ್ರೆಸ್ ಮುಖಂಡರ ಜೊತೆಗೆ ಮಾತನಾಡಿದ್ದೇನೆ. ಅವರು ಸರಿಯಾಗಿ ಸ್ಪಂದನೆ ಮಾಡಲಿಲ್ಲ. ನೀವು ಹೇಳಿದ ಮತ್ತು ತೋರಿದ ದಾರಿಯೇ ನನಗೆ ಮುಖ್ಯ. ಎಲ್ಲರೂ ಬಿಜೆಪಿಗೆ ಸೇರುವಂತೆ ಸೂಚಿಸಿದ್ದರಿಂದ ಅದೇ ಪಕ್ಷಕ್ಕೆ ಹೋಗುವುದಾಗಿ ಹೇಳಿದರು.