ಪೊಲೀಸ್ ಸಿಬ್ಬಂದಿ ಸ್ಥಳಾಂತರಕ್ಕೆ ಜಯ ಕರ್ನಾಟಕ ಒತ್ತಾಯ
ಗುಲ್ಬರ್ಗ: ರಾಜ್ಯ ಮೀಸಲು ಪೊಲೀಸ್ 6ನೇ ಪಡೆ ಸಿಬ್ಬಂದಿಯನ್ನು ಸುಲ್ತಾನಪುರ ವಸತಿಗಳಿಂದ ನಗರದಲ್ಲಿರುವ ಸೂಪರ್ ಮಾರ್ಕೆಟ್ ಲೋಕೋಪಯೋಗಿ ಇಲಾಖೆ ವಸತಿಗಳಿಗೆ ಸ್ಥಳಾಂತರಿಸಲು ಜಯ ಕರ್ನಾಟಕ ಒತ್ತಾಯಿಸಿದೆ.
ಕೆಎಸ್‌ಆರ್‌ಪಿ 6ನೇ ಪಡೆ ಮುಂಚಿತವಾಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿರುವಾಗ ನಗರದಲ್ಲಿ ಕೊಲೆ, ಸುಲಿಗೆ, ಸರಗಳ್ಳತನದಂತಹ ಪ್ರಕರಣಗಳು ಕಡಿಮೆ ಆಗಿದ್ದವು. ಅಲ್ಲದೆ ಸಾರ್ವಜನಿಕರು ನೆಮ್ಮದಿಯಿಂದ ಬದುಕುತ್ತಿದ್ದರು. ಆದರೆ ಕಳೆದ 2 ವರ್ಷಗಳ ಹಿಂದೆ ನಗರದಲ್ಲಿ ವಾಸವಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಅವರ ಕುಟುಂಬ ಸಮೇತ ನಗರದಿಂದ ಸುಮಾರು 7 ಕಿ.ಮೀ ದೂರದಲ್ಲಿರುವ ತಾಜಾಸುಲ್ತಾರನಪುರ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಈ ಕಾರಣದಿಂದ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗತೊಡಗಿವೆ. ಜನನಿಬಿಡ ಪ್ರದೇಶ ಸೂಪರ್ ಮಾರ್ಕೆಟ್‌ನಲ್ಲಿ ಸಂಜೆ ವಿಶೇಷವಾಗಿ ಮಹಿಳೆಯರು ಭಯದಿಂದ ತಿರುಗಾಡುವ ಪ್ರಸಂಗ ನಿರ್ಮಾಣವಾಗಿದೆ. ಅಲ್ಲದೆ ನಗರದಲ್ಲಿ ಏನೇ ಅನಾಹುತ ಸಂಭವಿಸಿದರೂ ಕೆಎಸ್‌ಆರ್‌ಪಿ ಸಿಬ್ಬಂದಿಗೆ ಸುಲ್ತಾನಪುರದಿಂದ ಘಟನಾ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಅಲ್ಲಿಯ ವಸತಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಆದ್ದರಿಂದ ನಗರದಿಂದ ಸುಲ್ತಾನಪುರಕ್ಕೆ ಸ್ಥಳಾಂತರಿಸಿಲಾದ ಸಿಬ್ಬಂದಿಯನ್ನು ಸೂಪರ್ ಮಾರ್ಕೆಟ್ ಲೋಕೋಪಯೋಗಿ ಇಲಾಖೆ ವಸತಿಗಳಿಗೆ ಸ್ಥಳಾಂತರಬೇಕೆಂದು ಜಯ ಕರ್ನಾಟಕ ರಾಜ್ಯಾಧ್ಯಕ್ಷ ವೀರಣ್ಣ ಎಂ. ಕೋರಳ್ಳಿ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ, ರಾಜ್ಯ ಯೋಜನಾ ಸಂಚಾಲಕ ಬಿ.ಬಿ. ನಾಟಕ, ಗೌರವಾಧ್ಯಕ್ಷ ರವಿಕುಮಾರ ಗೌಳಿ, ಬಸವರಾಜ ಮಡಿವಾಳ, ತಾಲೂಕು ಕಾರ್ಯಾಧ್ಯಕ್ಷ ಶಿವುಕುಮಾರ ನಾಸಿ ಸೇರಿದಂತೆ ಕಾರ್ಯಕರ್ತರು ಇದ್ದರು.