ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಾಂತ್ರಿಕ ವಿಭಾಗ ಸ್ಥಳಾಂತರ?

Vishwanath S
Updated On : 25 Jan 2014, 12:47 pm

ಹುಣಸಗಿ: ಪಟ್ಟಣದಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹುಣಸಗಿ ಯಾಂತ್ರಿಕ ವಿಭಾಗ ಕಚೇರಿ ಸ್ಥಳಾಂತರಗೊಳ್ಳಲಿದೆ ಎಂದು ತಿಳಿದು ಬಂದಿದೆ.
  ಸದ್ಯ ಪಟ್ಟಣದಲ್ಲಿರುವ ಕಚೇರಿಯನ್ನು ಬಾಗಲಕೋಟೆ ಜಿಲ್ಲೆಗೆ ಸ್ಥಳಾಂತರಗೊಳಿಸುವಂತೆ ಬಿಜಾಪುರ ಜಿಲ್ಲೆಯ ನಿಡಗುಂದಿಯ ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಅವರು ನೀರಾವರಿ ಮಂತ್ರಿ ಎಂ.ಬಿ. ಪಾಟೀಲ್ ಹಾಗೂ ಬೆಂಗಳೂರಿನ ಮುಖ್ಯ ಅಭಿಯಂತರರಿಗೆ ಬರೆದಿರುವ ಮನವಿ ಪತ್ರದಲ್ಲಿ ಅವರು ಸ್ಥಳಾಂತರಿಸುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
  1982ರಲ್ಲಿ ಆರಂಭವಾದ ಯಾಂತ್ರಿಕ ಕಚೇರಿ ಕೆಬಿಜೆಎನ್‌ಎಲ್‌ನಲ್ಲಿ ಬರುವ ಎಲ್ಲಾ ವಾಹನಗಳ ಮತ್ತು ಯಂತ್ರೋಪಕರಣಗಳ ರಿಪೇರಿ ಕೆಲಸಕ್ಕಾಗಿ ಆರಂಭವಾಗಿತ್ತು. ಇತ್ತೀಚೆಗೆ ತಾಲೂಕು ಕೇಂದ್ರದಲ್ಲಿ ಹುಣಸಗಿ ಪಟ್ಟಣದ ಹೆಸರು ಇದ್ದು, ಹೆಚ್ಚೆಚ್ಚು ಸರ್ಕಾರಿ ಕಚೇರಿಗಳು ಆರಂಭಿಸಬೇಕಾದ ಸಂದರ್ಭದಲ್ಲಿ ಇದ್ದೊಂದು ಕಚೇರಿ ಕಳೆದುಕೊಳ್ಳುವ ಭೀತಿಯಲ್ಲಿದೆ. ಹೈ-ಕ ಪ್ರದೇಶದ ಜಿಲ್ಲೆಗಳಲ್ಲಿನ ಸರ್ಕಾರಿ ಕಚೇರಿಗಳನ್ನು ಹೆಚ್ಚು ಸಶಕ್ತಿಗೊಳಿಸಲು 371(ಜೆ) ಕಲಂ ಪ್ರಕಾರ ಹೆಚ್ಚಿನ ಅನುದಾನ ದೊರೆಯಲಿದೆ. ಇಂತಹ ಸಂದರ್ಭದಲ್ಲಿ ಕಚೇರಿಯ ಸ್ಥಳಾಂತರ ಎಷ್ಟು ಸರಿ?
  ಹುಣಸಗಿಯಲ್ಲಿ ಯಾಂತ್ರಿಕ ವಿಭಾಗ ಕಚೇರಿ ಆರಂಭವಾದಾಗಿನಿಂದಲೂ ಸ್ವಂತ ನಿವೇಶನ, ಕಟ್ಟಡವನ್ನು ಹೊಂದಿತ್ತು. ಇಲ್ಲಿನ ಸಿಬ್ಬಂದಿಗೆ ನಿಗಮದಿಂದ ಉಚಿತ ವಸತಿ ಸೌಲಭ್ಯ ನೀಡಲಾಗಿತ್ತು. ಒಂದು ವೇಳೆ ಬಾಗಲಕೋಟೆಗೆ ಸ್ಥಳಾಂತರಿಸಿದ್ದೇ ಆದಲ್ಲಿ, ಕಚೇರಿಯು ಬಾಡಿಗೆ ರೂಪದಲ್ಲಿ ಇರಬೇಕಾಗಿ ಬರಬಹುದು. ಸಿಬ್ಬಂದಿಗೆ ಬಾಡಿಗೆ ಮನೆಯಲ್ಲಿ ಇರಬೇಕಾದಂಥ ಸ್ಥಿತಿ, ಮಕ್ಕಳ ಶಿಕ್ಷಣದಲ್ಲಿ ಏರುಪೇರು ಆಗಬಹುದು.
ಈ ಕಚೇರಿಗೆ ಹೊಂದಿಕೊಂಡಂತೆ ಕೃಷ್ಣಾಪುರ, ಭೀಮರಾಯನಗುಡಿ, ಹುಣಸಗಿ ಸೇರಿದಂತೆ ಮೂರು ಉಪ ವಿಭಾಗ ಕಚೇರಿಗಳಿವೆ. ಈಗಾಗಲೇ ಹುಣಸಗಿ ತಾಲೂಕು ಎಂದು ಘೋಷಣೆಯಾಗಿದ್ದು, ವಿಶೇಷ ತಹಸೀಲ್ದಾರ್ ಕಚೇರಿ ಸೇರಿದಂತೆ ಅಧಿಕೃತವಾಗಿ ಹಲವು ಇಲಾಖೆಗಳ ಕಚೇರಿಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.
  ಈ ಯಾಂತ್ರಿಕ ವಿಭಾಗದ ವ್ಯಾಪ್ತಿಯಲ್ಲಿ ಸಿಂದಗಿ, ರಾಂಪೂರ, ಇಂಡಿ, ಜೇವರ್ಗಿ, ಲಿಂಗಸ್ಗೂರು, ದೇವದುರ್ಗ, ಮತ್ತು ಸುರಪುರ, ಶಹಾಪುರ ತಾಲೂಕಿನಲ್ಲಿ ಬರುವ ಕೃಷ್ಣಾ ಭಾಗ್ಯ ಜಲ ನಿಗಮ, ಯಾದಗಿರಿ ಜಿಲ್ಲೆಯ ಲೋಕೋಪಯೊಗಿ, ಕೃಷ್ಣಾ ಕಾಡಾ, ಬಿಟಿಡಿಎ, ಆರ್‌ಆರ್, ವಾಹನಗಳ ದುರಸ್ತಿ ಕಾರ್ಯಗಳನ್ನು ನೋಡಿಕೊಳ್ಳುತ್ತಿದೆ. ನಿಗಮದ ವಾಹನಗಳ ದುರಸ್ತಿ, ರದ್ದಿ ಪ್ರಸ್ತಾವನೆ ವಗೈರೆಗಳ ಮೇಲ್ವಿಚಾರಣೆ ಹಾಗೂ ವಾಹನಗಳ ಅನುಪಯುಕ್ತಗೊಳಿಸುವಿಕೆಯನ್ನು ನೋಡಿಕೊಳ್ಳುತ್ತಿದೆ. ಇದೆಲ್ಲದಕ್ಕೂ ಹೆಚ್ಚಾಗಿ ಹುಣಸಗಿಯಲ್ಲಿ ಅಂದಾಜು 33, ಕೃಷ್ಣಾಪುರ 58, ಭೀಮರಾಯನಗುಡಿ 78 ಸೇರಿದಂತೆ 169ಕ್ಕೂ ಅಧಿಕ ವಾಹನಗಳ ನಿರ್ವಹಣೆ ಹೊಂದಿರುತ್ತದೆ.
  ಬಾಗಲಕೋಟೆ ಹುಣಸಗಿಯಿಂದ ಸುಮಾರು 140 ಕಿ.ಮೀ. ದೂರವಿದ್ದು, ವಾಹನಗಳ ದುರಸ್ತಿ ನೋಡಿಕೊಳ್ಳಲು ಕಷ್ಟವಾಗಬಹುದು. ಅದರಂತೆ ಬಾಗಲಕೋಟೆಯಿಂದ ಕೃಷ್ಣಾಪುರ 186 ಕಿ.ಮೀ. ಹಾಗೂ ಭೀ.ಗುಡಿಯಿಂದ 215 ಕಿ.ಮೀ. ದೂರವಾಗುತ್ತದೆ. ಹಿತದೃಷ್ಟಿಯಿಂದ ಸ್ಥಳಾಂತರಿಸುವುದು ಬೇಡ ಎನ್ನಲಾಗುತ್ತಿದೆ.
ಹುಣಸಗಿ ಬಂದ್: ಹುಣಸಗಿ ತಾಲೂಕು ಹೋರಾಟ ಸಮಿತಿ, ಕೃಷ್ಣಾ ನೀರು ಬಳಕೆದಾರ ಸಹಕಾರ ಸಂಘಗಳ ಒಕ್ಕೂಟ, ವೀರರಾಣಿ ಕಿತ್ತೂರು ಚೆನ್ನಮ್ಮ ಯುವಕ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ, ಭಾರತೀಯ ಕಿಸಾನ ಸಂಘ, ಭಗತ್‌ಸಿಂಗ್ ಗೆಳೆಯರ ಬಳಗ, ದಲಿತ ಸಂಘರ್ಷ ಸಮಿತಿ, ಯುವಜನ ಹೋರಾಟ ಸಮಿತಿ, ಭಗೀರಥ ಸಂಘಗಳು ಸಭೆ ನಡೆಸಿ ಹುಣಸಗಿ ಬಂದ್ ನಡೆಸಲು ಯೋಚಿಸಿವೆ.
  ಒಂದು ಕೃಷ್ಣಾ ಅಚ್ಚಕಟ್ಟು ಪ್ರದೇಶ, ಕೃಷ್ಣಾ ಕಾಡಾ ಮಂಡಳಿಯ ಅಧ್ಯಕ್ಷರಾಗಿ ಮಂತ್ರಿಗಳ ರೀತಿಯ ಎಲ್ಲಾ ಸಕಲ ಸೌಲಭ್ಯ ಅನುಭವಿಸಿದ ಬಸವರಾಜ ಕುಂಬಾರ ಅವರಿಗೆ ಎಲ್ಲಾ ಜಿಲ್ಲೆಗಳು ಅಷ್ಟೆ. ಇಂತಹ ದುರ್ಬುದ್ಧಿ ಯಾಕೆ ಬಂತು ತಿಳಿಯದಾಗಿದೆ ಎಂದು ನೀರು ಬಳಕೆದಾರ ಸಂಘಗಳ ಒಕ್ಕೂಟ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ವಿಭಾಗ ಕಚೇರಿ ಉಳಿಸಿಕೊಳ್ಳಲು ನಡೆಯುವ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.
ಈ ಹಿಂದೆ ನನ್ನ ಅವಧಿಯಲ್ಲಿ ಹುಣಸಗಿಯಿಂದ ಬಾಗಲಕೋಟೆಗೆ ಕಚೇರಿ ಸ್ಥಳಾಂತರಿಸಲು ಎರಡು ಬಾರಿ ಪ್ರಯತ್ನ ಮಾಡಿದ್ದರು. ನಾನು ಇರುವವರೆಗೂ ಈ ಕಚೇರಿ ಇಲ್ಲಿಂದ ಸ್ಥಳಾಂತರಿಸದಂತೆ ನೋಡಿಕೊಂಡಿದ್ದೇನೆ. ಇನ್ನು ಮುಂದೆಯೂ ಕೂಡಾ ಕಚೇರಿ ಸ್ಥಳಾಂತರಕ್ಕೆ ಯಾರಾದರೂ ಪ್ರಯತ್ನ ಮುಂದುವರಿಸಿದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ.
-ರಾಜುಗೌಡ, ಮಾಜಿ ಸಚಿವ
ನೀರಾವರಿ ಸಚಿವ ಎಂ.ಬಿ. ಪಾಟೀಲರೊಂದಿಗೆ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಯಾಂತ್ರಿಕ ವಿಭಾಗ ಕಚೇರಿ ಹುಣಸಗಿಯಿಂದ ಸ್ಥಳಾಂತರವಾಗಬಾರದು ಎಂದು ಆಗ್ರಹಿಸಿದ್ದೇನೆ. ಹುಣಸಗಿ ಜನತೆ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ.         -ರಾಜಾ ವೆಂಕಟಪ್ಪ ನಾಯಕ, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement