ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಯಲಲ್ಲೇ ಬದುಕಿನ ಬೆಳಕು ಕಾಣೋನೇ ಜಾಣ

Vishwanath S
Updated On : 28 Jan 2014, 11:40 am

ಕ.ಪ್ರ. ವಾರ್ತೆ  ಗುಲ್ಬರ್ಗ  ಜ.27
ಇಲ್ಲಿನ ಸಂಗಮೇಶ್ವರ ಮಹಿಳಾ ಮಂಡಳದ ಲೇಖಕಿಯರ ವೇದಿಕೆ, ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನ ಗುಲ್ಬರ್ಗ ಘಟಕ ಹಾಗೂ ಕಾವ್ಯಾಂಜಲಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹೊಸ ವರ್ಷದ ನಿಮಿತ್ತ ಆಯೋಜಿಸಲಾಗಿದ್ದ ಸಾಹಿತ್ಯ ಸೌರಭ ಕವಿಗೋಷ್ಠಿ ಗೃಹಿಣಿಯರ ಕವನ ಪ್ರತಿಭಾ ಪ್ರದರ್ಸನಕ್ಕೆ  ವೇದಿಕೆಯಾಯಿತು.
15 ಕ್ಕೂ ಹೆಚ್ಚು ಕವಯಿತ್ರಿಯರು ಕವಿಗೋಷ್ಠಿಯಲ್ಲಿ  ಕವನ ವಾಚನ ಮಾಡಿದರಲ್ಲದೆ ಕವನಗಳ ಮೂಲಕವೇ ಚುನಾವಣೆಯಲ್ಲಿ ಹಣ, ಹೆಂಡದ ಆಮಿಷಗಳ ಮೇಲೆ ಬೆಳಕು ಚೆಲ್ಲುವ, ಬದುಕಿನ ಸಾರಸತ್ವ ಸೆರೆ ಹಿಡಿಯುವ, ಬಾನ ಬಾಂದಳ, ಗುಲಾಬಿ ಎಂದು ಬಯಲಿನಿಂದಲೇ ಬದುಕಿನ ಸಾರ ಪಡೆಯಬೇಕು ಎಂಬ ಜೀವನದ ಕಟು ವಾಸ್ತವಕ್ಕೆ ಕನ್ನಡಿ ಹಿಡಿಯುವ ಪ್ರಯತ್ನ  ಈ ಕವನಗಳಲ್ಲಿ ಕಂಡು ಬಂದವು.
ಮಾಲಾ ಕಮಲಾಪುರ ಅವರ ಕವಿತೆ ಧನದಾಹಿಗಳ ದುರಾಸೆಯ ಮನೋ ಭೂಮಿಕೆ, ಅದರಿಂದ ಬದುಕಲ್ಲಿ ಆಗುವ ಅನಾಹುತಗಳ ಮೇಲೆ ಬೆಳಕು ಚೆಲ್ಲಿದರೆ, ಸುಜಾತಾ ಜಂಗಮಶೆಟ್ಟಿ ಅವರ ಬಯಲ ಬೆಳಕು ಕವನದಲ್ಲಿ ಬಯಲಲ್ಲೇ ಬದುಕಿನ ಹೊಸ ಬೆಳಕು ಕಾಣಬೇಕು, ಅಲ್ಲಿಂದಲೇ ಬದುಕಿನ ಬಲ-ಬೆಂಬಲ ಪಡೆಯಬೇಕು ಎಂಬ ಸಂದೇಷ ಸಾರಿತು.  ಲೀಲಾವತಿ ಕುಲಕರ್ಣಿ ಅವರ ಮಹಾ ಚುನಾವಣೆ, ಅಲ್ಲಿನ ಗತ್ತು-ಗಮ್ಮತ್ತು, ಆಶೆ- ಆಮಿಷಗಳು, ಎಷ್ಟೇ ಪ್ರಚಾರ ನಡೆದರೂ ಮತದಾನದ ಮುನ್ನಾದಿನದ ರಾತ್ರಿಯೇ ನಿರ್ಣಾಯಕ ಎಂದು ಕಟುವಾಗಿ ಹೇಳುವ ಕವನದ ಸಾಲುಗಳು ನಮ್ಮ ಪ್ರಜಾಪ್ರಭುತ್ವದ ಚುನಾವಣೆ ವ್ಯವಸ್ಥೆಯಲ್ಲಿನ ಹುಳುಕು- ಕೊಳಕುಗಳನ್ನೆಲ್ಲ ಎತ್ತಿ ತೋರಿಸಿತ್ತು.
ಕವಿಗೋಷ್ಠಿಯಲ್ಲಿ  ಜ್ಯೋತಿ ಮಸಳಿ, ರೂಪಾ, ನೀಲಮ್ಮ, ಶಾಂತಾ ಪಸ್ತಾಪುರ, ರೇಣುಕಾ ರೆಡ್ಡಿ, ಶ್ಯಾಮಲಾ ಕುಲಕರ್ಣಿ, ರೇಣುಕಾ ಕವನ ವಾಚಿಸಿದರು.
ಸಾಧಕರಿಗೆ ಸತ್ಕಾರ: ಇದೇ ವೇದಿಕೆಯಲ್ಲಿ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಾಸ ಸಾಹಿತ್ಯ ಸಂಶೋಧಕ ಡಾ. ಸ್ವಾಮಿರಾವ ಕುಲಕರ್ಣಿ ಮತ್ತು ವಿಜಾಪುರ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಕ್ಕಳ ಕವಿ ಎ. ಕೆ. ರಾಮೇಶ್ವರ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸತ್ಕಾರಕ್ಕೆ ಪ್ರತಿಯಾಗಿ ಮಾತನಾಡಿದ ಸಾಧಕರಿಬ್ಬರೂ ತಮಗೆ ಗುಲ್ಬರ್ಗ ಸಕಲ ವಿಧಗಳಲ್ಲಿಯೂ
ಪ್ರೋತ್ಸಾಹಿಸುತ್ತಾ  ಸಾಧನೆಗೆ ಪೂರಕವಾಯ್ತು ಎಂದರು. ಸಂಗಮೇಶ್ವರ ಮಹಿಳಾ ಮಂಡಳದ ಸಹಕಾರ,
ಬೆಂಬಲ ಸ್ಮರಿಸಿದ ಡಾ. ಸ್ವಾಮಿರಾವ, ರಾಮೇಶ್ವರ ಅವರು ಈ ಭಾಗದಲ್ಲಿ ಸಾಂಸ್ಕೃತಿಕ ಪರಿಸರ ನಿರ್ಮಿಸುತ್ತಿರುವ ಸಂಘಟನೆ ಎಂದು ಮಹಿಳಾ ಮಂಡಳದ ಕೆಲಸ-ಕಾರ್ಯಗಳನ್ನು ಶ್ಲಾಘಿಸಿದರು.
ಸಂಗಮೇಶ್ವರ ಮಹಿಳಾ ಮಂಡಳದ ಅಧ್ಯಕ್ಷೆ ಇಂದಿರಾ ಮಾನ್ವೀಕರ್ ಮಾತನಾಡುತ್ತ ತಮ್ಮ ಕೆಲಸ ಕಾರ್ಯಗಳೊಂದಿಗೆ ಕವನ ಬರೆದು ಮಹಿಳೆಯರು ಇಲ್ಲಿ ಉತ್ತಮವಾಗಿ ಪ್ರಸ್ತುತಪಡಿಸಿದ್ದಾರೆ.
 ಇದು ಹೆಮ್ಮೆಯ ಸಂಗತಿ. ಸರ್ವರ ಸಹಕಾರದಿಂದ ಮಹಿಳೆಯರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದರು.
ಸಂಗಮೇಶನ ಯಶೋಗಾಥೆಗೆ ಶ್ಲಾಘನೆ ಸಂಗಮೇಶ್ವರ ಮಹಿಳಾ ಮಂಡಳಿ ಬಾಲಕಾರ್ಮಿಕರ ಪುನರ್ವಸತಿಗಾಗಿ ಸರ್ಕಾರ ರೂಪಿಸಿದ್ದ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಕೃಷ್ಣ ನಗರ ಕೊಳಚೆ ಪ್ರದೇಶದ, 5ನೇ ತರಗತಿಯಲ್ಲಿ ಶಾಲೆ ಬಿಟ್ಟ ಬಾಲಕ ಸಂಗಮೇಶ ದೊರಕಿದ್ದ. ಮಂಡಳಿಯ ಇಂದಿರಾ ಮಾನ್ವೀಕರ್, ಶೋಭಾ ರಂಜೋಳಕರ್, ಸಂಧ್ಯಾ ಹೊನಗುಂಟೀಕರ್ ಅವರು ಈತನಿಗೆ ಪ್ರೋತ್ಸಾಹಿಸಿ ಸಮಾಜದ ಮುಖ್ಯವಾಹಿನಿಗೆ ತಂದರು. ಡಾ. ಸ್ವಾಮೀರಾವ್ ಕುಲಕರ್ಣಿ ಈತನ ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ನಿಂತರು. ಇಂದು ಸಂಗಮೇಶ ಬಿಕಾಂ ಮೂರನೇ ವರ್ಷದಲ್ಲಿ ಓದುತ್ತಿದ್ದಾನೆ.  ತಾನಿರುವ ಪರಿಸರದಲ್ಲೇ ಸಾಕ್ಷರತೆ ದೀಪ ಹಚ್ಚಲು ಸಂಜೆ ಶಾಲೆ ಶುರು ಮಾಡಿದ್ದಾನೆ. ಜೊತೆಗೇ ಸ್ವದೇಶಿ ಸಂಸ್ಕೃತಿ ಬೆಳೆಸಲು ಆಂದೋಲನಕ್ಕೆ ಚಾಲನೆ ನೀಡಿದ್ದಾನೆ. ಚರಂಡಿ ಸಮಸ್ಯೆಯಿಂದ ಪಾರಾಗುವುದು ಹೇಗೆ ಎಂಬ ವಿಷಯದ ಮೇಲೆ ಯೋಜನೆ ಸಿದ್ಧಪಡಿಸಿದ್ದು ಇದಕ್ಕೆ ಸ್ಥಳೀಯ ಶಾಸಕ ದತ್ತಾತ್ರೇಯ ಪಾಟೀಲ್ ತಮ್ಮ ನಿಧಿಯಿಂದ 5 ಲಕ್ಷ ಮಂಜೂರು ಮಾಡಿ ಯೋಜನೆ ಅನುಷ್ಠಾನಕ್ಕೆ ಬೆಂಬಲಿಸಿದ್ದಾರೆ.
ಇಷ್ಟೆಲ್ಲ ಸಾಧನೆ ಮಾಡಿರುವ ಸಂಗಮೇಶನಿಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ತಾನಿಂದು ಈ ಹಂತ ತಲುಪಲು ಸಂಗಮೇಶ್ವರ ಮಹಿಳಾ ಮಂಡಳಿಯ ಎಲ್ಲರೂ ಕಾರಣ. ಎಷ್ಟು ಓದುವೆಯೋ ಓದು, ನಾನು ಕಲಿಸುವೆ ಎಂದು ಅಭಯ ನೀಡಿದ ಡಾ. ಸ್ವಾಮೀರಾವ ಕುಲಕರ್ಣಿ ಅವರು ತಂದೆ ಸಮಾನ ಎಂದು ಸಂಗಮೇಶ ಸಹಾಯ ಮಾಡಿದ ಎಲ್ಲರನ್ನೂ ಸ್ಮರಿಸಿದ.
ಕಾವ್ಯಾಂಜಲಿಯ ಸುನಂದಾ, ಡಾ. ವಿಜಯಲಕ್ಷ್ಮಿ ಕೋಸಗಿ, ಲೇಖಕಿಯರ ಬಳಗದ ಶೋಭಾ ರಂಜೋಳಕರ್, ಸಂಧ್ಯಾ ಹೊನಗುಂಟೀಕರ್, ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement