ಬಸ್ ಸೌಲಭ್ಯಕ್ಕೆ ಪ್ರಯತ್ನ: ಜಾಧವ್
ಚಿಂಚೋಳಿ: ತಾಲೂಕಿನಲ್ಲಿ ಸಾರಿಗೆ ಸಂಪರ್ಕವಿಲ್ಲದ ಗ್ರಾಮಗಳಿಗೆ ಬಸ್ ಸೌಲಭ್ಯ ಒದಗಿಸಿ ಕೊಡುವ ಪ್ರಯತ್ನ ನಡೆದಿದೆ ಎಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು.
ತಾಲೂಕಿನ ಸಾಲೇಬೀರನಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಗೌಡಪ್ಪಗುಡಿ ತಾಂಡದಲ್ಲಿ ರವಿವಾರ ನೂತನ ಬಸ್ ಸಂಚಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸಾರಿಗೆ ಸಂಪರ್ಕದಿಂದ ಶಾಲಾ ಕಾಲೇಜು ಮಕ್ಕಳಿಗೆ ವಯೋವೃದ್ಧರಿಗೆ, ಅಂಗವಿಕಲರಿಗೆ, ರೋಗಿಗಳಿಗೆ ಮತ್ತು ಗರ್ಭಿಣಿಯರಿಗೆ ಅನುಕೂಲವಾಗಿದೆ. ಚಿಂಚೋಳಿ ಘಟಕಕ್ಕೆ 15 ಹೊಸ ಬಸ್ ಅತೀ ಶೀಘ್ರದಲ್ಲಿ ಬರಲಿವೆ ಎಂದರು.
ಜಿಲ್ಲಾ ಸಾರಿಗೆ ವ್ಯವಸ್ಥಾಪಕ ಎಂ.ಎ. ಮುಲ್ಲಾ ಮಾತನಾಡಿ, ತಾಲೂಕಿನಲ್ಲಿ ಜಿಲವರ್ಷ, ಸಂಗಾಪುರ, ವೆಂಕಟಾಪುರ, ಚಂದನಕೇರಾ, ಎಲಮಡಗಿ ತಾಂಡ, ರಟಕಲ್, ಹಾಗೂ ಗೌಡಪ್ಪಗುಡಿ ತಾಂಡಕ್ಕೆ ಹೊಸ ಬಸ್ ಸಂಚಾರ ಪ್ರಾರಂಭಗೊಂಡಿವೆ ಎಂದರು. ವ್ಯವಸ್ಥಾಪಕ ಧೂಳಪ್ಪಾ, ಶಾಮರಾವ ರಾಠೋಡ್, ತಾಪಂ ಸದಸ್ಯ ಜಾನೂ ರಾಠೋಡ್, ವಿಠಲ ಚವ್ಹಾಣ, ಧರ್ಮು ನಾಯಕ, ಬಲಭೀಮ ರಾಠೋಡ್, ಹೀರಾಸಿಂಗ, ರಾಜೂ ರಾಠೋಡ್, ಪ್ರಭುಲಿಂಗ ಲೇವಡಿ, ಬಸರೆಡ್ಡಿ ಸೇರಿಕಾರ ಇತರರಿದ್ದರು.