ವಿದ್ಯುತ್ ಅವಘಡಕ್ಕೆ ಮಾಹಿತಿ ಕೊರತೆಯೇ ಕಾರಣ: ನಾಗರಾಜ
ಗುರುಮಠಕಲ್: ಸಾರ್ವಜನಿಕರಲ್ಲಿ ವಿದ್ಯುತ್ ಅವಘಡಗಳು ಸಂಭವಿಸುವ ವಿಧಾನಗಳ ಕುರಿತು ಅರಿವು ಮೂಡಿಸಿದಾಗ ವಿದ್ಯುತ್ ಅಪಘಾತಗಳನ್ನು ತಡೆಗಟ್ಟಲು ಸಾಧ್ಯವೆಂದು ಯಾದಗಿರಿ ಕಾರ್ಯನಿರ್ವಾಹಕ ಅಭಿಯಂತರರಾದ ಕೆ.ಜೆ ನಾಗರಾಜ ಅಭಿಪ್ರಾಯಪಟ್ಟರು.
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕಾರ್ಯ ಮತ್ತು ಪಾಲನೆ ಶಾಖೆ ಗುರುಮಠಕಲ್ ಉಪ ವಿಭಾಗ ಯಾದಗಿರಿ ವತಿಯಿಂದ ಪಟ್ಟಣದ ಸರ್ಕಾರಿ ಬಾಲಕರ ಪಪೂ ಕಾಲೇಜು(ಪ್ರೌಢ) ವಿಭಾಗದಲ್ಲಿ ಆಯೋಜಿಸಿದ್ದ ವಿದ್ಯುತ್ ಸುರಕ್ಷತಾ ಮಾಸಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಗರ, ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಾಗಿ ವಿದ್ಯುತ್ ಅವಘಡಗಳು ಸಂಭವಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ರೈತರು ಮತ್ತು ಜನರಲ್ಲಿ ವಿದ್ಯುತ್ ಅಪಘಾತಗಳ ಕುರಿತು ಮಾಹಿತಿಯಿಲ್ಲದಿರುವುದು ಅವಘಡಗಳಿಗೆ ಕಾರಣವಾಗುತ್ತದೆ ಎಂದರು.
ಗ್ರಾಮೀಣರಲ್ಲಿ ಅರಿವು ಮೂಡಿಸಲು..: ವಿಶೇಷವಾಗಿ ಗ್ರಾಮೀಣ ಜನರಲ್ಲಿ ವಿದ್ಯುತ್ ಸುರಕ್ಷತೆಯ ಕುರಿತು ಅರಿವು ಮೂಡಿಸಲು ಇಲಾಖೆ ಇಂತಹ ಕಾರ್ಯಕ್ರಮವನ್ನು ರೂಪಿಸಿದೆ. ವಿದ್ಯುತ್ ಕಂಬಕ್ಕೆ ಎತ್ತುಗಳನ್ನು ಕಟ್ಟುವುದು, ವಿದ್ಯುತ್ ಫ್ಯೂಸ್ ಕಟ್ ಆದರೇ ತಾವೇ ಅದರ ದುರಸ್ತಿಗೆ ಮುಂದಾಗುವುದು ಸೇರಿದಂತೆ ಅನೇಕ ಕಾನೂನು ಬಾಹಿರ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸಿ ಯಾವುದೇ ಸಮಸ್ಯೆಗಳಿದ್ದಲ್ಲಿ ಇಲಾಖೆಗೆ ಮಾಹಿತಿ ನೀಡಲು ಸೂಚಿಸಿದರು. ಅಲ್ಲದೆ ವಿದ್ಯುತ್‌ನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಬೇಕೆಂದು ಕಿವಿಮಾತು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐ ಪಿ.ಕೆ. ಚೌದ್ರಿ, ರಸ್ತೆ ಮತ್ತು ವಿದ್ಯುತ್ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮಕ್ಕೆ ಸಂಬಂಧಿಸದೇ ಇರುವ ಮಾಧ್ಯಮದ ವಿಷಯದ ಬಗ್ಗೆ ಮಾತನಾಡುತ್ತ, ಹಿಂದೆ ಮುದ್ರಣ ಮಾಧ್ಯಮಗಳು ಶೇ.75 ಸುಳ್ಳು ಹೇಳುತ್ತಿದ್ದವು. ಈಗ ವಿದ್ಯುನ್ಮಾನ ಮಾಧ್ಯಮಗಳು ಶೇ.50ರಷ್ಟು ನಿಜ ಹೇಳುತ್ತಿವೆ ಎಂದು ಹೇಳಿ ಸಾರ್ವಜನಿಕರ ಅಸಮಾಧಾನಕ್ಕೆ ಗುರಿಯಾದರು.
ಸಾರಿಗೆ ವಾಹನ ನಿರೀಕ್ಷಕ ವೆಂಕಟಪ್ಪ ಕಲಾಲ್, ಶೋರಾಪೂರ ಎಇಇ ಬಸವರಾಜ, ಶಹಪೂರ ಎಇಇ ಶಂಕರ ಆಡಕಿ, ಎಸ್.ಎಂ ಭೂತಾಳ, ಟಿ.ಶ್ರೀನಿವಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬಸ್ ಘಟಕ ವ್ಯವಸ್ಥಾಪಕ ಗಿರೀಶ, ಶಂಕರ್ ಗುತ್ತಿ, ಚಂದಪ್ಪ, ನರಸಿಂಹುಲು ಕಾನಾಗುಡ್ಡ, ಎಇಇ ಇಲಿಯಾಸ್ ಅಹ್ಮದ್, ನರೇಂದ್ರ ರಾಠೋಡ, ನಾರಾಯಣರೆಡ್ಡಿ, ಸಿಆರ್‌ಪಿ, ಪ್ರವೀಣ ಕಾಕಲವಾರ, ಎಸ್.ಓ ದೇವಿಂದ್ರಪ್ಪ, ಗುತ್ತಿಗೆದಾರರಾದ ಯಲ್ಲಪ್ಪ, ವೆಂಕಟರೆಡ್ಡಿ, ಸತೀಶ ತಿವಾರಿ ವೇದಿಕೆ ಮೇಲಿದ್ದರು. ಸ್ವಾಮಿ ವಿವೇಕಾನಂದ ವೇದಿಕೆ ವತಿಯಿಂದ ಕಾರ್ಯಕ್ರಮ ಆಯೋಜನೆಗೆ ಸಹಕಾರ ನೀಡಲಾಯಿತು. ಪಟ್ಟಣದ ಸುಮಾರು ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು, ಎಇಇ ರಾಘವೇಂದ್ರ ಸರ್ವರನ್ನು ಸ್ವಾಗತಿಸಿ, ವಂದಿಸಿದರು. ಶಶಿಕಾಂತ ಜನಾರ್ಧನ ನಿರೂಪಿಸಿದರು.