ಐವರು ಸಾಧಕರಿಗೆ ಸಿದ್ಧತೋಟೇಂದ್ರ ಪುರಸ್ಕಾರ
ಗುಲ್ಬರ್ಗ: ಜಿಲ್ಲೆಯ ಶ್ರೀಕ್ಷೇತ್ರ ನಾಲವಾರ ಶ್ರೀಕೋರಿಸಿದ್ದೇಶ್ವರ ಸಂಸ್ಥಾನ ಮಠದಿಂದ ನೀಡಲ್ಪಡುವ ಶ್ರೀಸಿದ್ಧತೋಟೇಂದ್ರ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆಗೈದ ಐವರು ಗಣ್ಯರಿಗೆ ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಕನ್ನಡದ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ, ವಿಆರ್‌ಎಲ್ ಮೀಡಿಯಾ ಚೇರ್ಮನ್ ವಿಜಯ ಸಂಕೇಶ್ವರ, ಉದ್ಯಮಿ ಹಾಗೂ ಶಾಸಕ ಅಶೋಕ ಖೇಣಿ, ಖ್ಯಾತ ಹಿಂದುಸ್ತಾನಿ ಗಾಯಕ ನರಸಿಂಹಲು ವಡಿವಾಟಿ ಹಾಗೂ ಪ್ರವಚನ ಪಂಡಿತ ಕಾಶಿನಾಥ ಶಾಸ್ತ್ರಿ ಸಿದ್ಧತೋಟೇಂದ್ರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 10,000 ನಗದು, ಪುರಸ್ಕಾರ, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ.
ನಾಳೆ ಪ್ರದಾನ: ಜ.30ರಂದು ನಾಲವಾರ ಕ್ಷೇತ್ರದಲ್ಲಿ ನಡೆಯಲಿರುವ ಕೋರಿಸಿದ್ಧೇಶ್ವರ ಶಿವಯೋಗಿಗಳ ಚಾತ್ರಾ ಮಹೋತ್ಸವದ ಸಮಾರಂಭದಲ್ಲಿ ಕೋಡಿಮಠದ ಶಿವಯೋಗಿ ರಾಜೇಂದ್ರಸ್ವಾಮಿ ಅವರ ಸನ್ನಿಧಿಯಲ್ಲಿ ರೇಲ್ವೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಮಠದ ಮಹಾದೇವ ಗೆಂವಾರ ತಿಳಿಸಿದ್ದಾರೆ.
ಜ.30ರಂದು ಮಧ್ಯರಾತ್ರಿಯಲ್ಲಿ ಮಠದ ಸದ್ಭಕ್ತರ ಹರಕೆಯ ತನಾರತಿ ಮಹೋತ್ಸವದಲ್ಲಿ ನಾಡಿನ, ಹಾಗೂ ಹೊರನಾಡಿನ ಭಕ್ತರು ಪಾಲ್ಗೊಳ್ಳುವರು. ಜ.31ರಂದು ಸಾಯಂಕಾಲ 6 ಗಂಟೆಗೆ ಕೋರಿಸಿದ್ದೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಭವ್ಯ ರಥೋತ್ಸವ ನಡೆಯಲಿದೆ. ಅಂದು ರಾತ್ರಿ 8 ಗಂಟೆಗೆ ರಥೋತ್ಸವ ನಂತರ ಜಾತ್ರಾ ಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ.