ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗುಲ್ಬರ್ಗ ಗುದ್ಮುರ್ಗಿ ಮ್ಯಾಗ ಸರಳ ಕಂಡ್ರೂ, ಅದರೊಳಗ ಬಕ್ಳ ಭಾನ್ಗಡಿ ಸೇರಿಕೊಂಡಾವ್ರಿ

Vishwanath S
Updated On : 29 Jan 2014, 11:23 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜ.28
ರೌಡಿ ಮುನ್ನಾನ ಜೊತೆಗಿನ ಗುದಮುರಗಿನೇ ಬನಾವಟಿ ಅದರಿ.. ಮುನ್ನಾ ಶೂಟೌಟ್, ಪಿಎಸ್‌ಐ ಹಾಗೂ ಮಗ ಮಲ್ಲು ದಾರುಣ ಸಾವು ಇದ್ರಾಗ ಹೆಜ್ಜಿ ಹೆಜ್ಜಿಗೂ ಬನಾವಟಿನೇ ಬಕ್ಳ ಕಾಣಲಕತ್ತದ. ಯಾವುದರಲ್ಲೂ ಯಾನೂ ನಿಕ್ಕಾ ಇಲ್ಲ ನೋಡ್ರಿ. ಪೊಲೀಸರು ಕರದ್ರ ಬರೋ ಮುನ್ನಾನ ಮ್ಯಾಗ ಮುಗಿಬೀಳ್ರಿ ಅಂತ ಪಿಎಸ್‌ಗಳಿಗೆ ಹಿರಿಯ ಅಧಿಕಾರಿಗಳಲ್ದೆ ಇನ್ನಾರ್ರಿ ಹೇಳ್ತಾರೆ? ಮುಂದ ಓಡು ಅನ್ನೋದು, ಹಿಂದ ಹಿಡಿ ಅನ್ನೋದು.. ಈ ಬಾರಾ ಭಾನಗಡಿಯೊಳಗ ಮಗ ಮಲ್ಲು ಹಕನಕ ಸತ್ತಹೋದ, ಮುಪ್ಪಿನ ಕಾಲಕ್ಕ ನಮಗೆಲ್ಲಾರಿಗೂ ಕಣ್ಣೀರಾಗೇ ಕೈತೊಳೆಯುವಂಗ ಮಾಡ್ದ...
  ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಅವರ ತಂದೆ ಕರಬಸಪ್ಪ ಬಂಡೆ ಕೋಪ- ತಾಪದಿಂದ, ದವಡೆ ಅವಡುಗಚ್ಚುತ್ತ ಮೇಲಿನಂತೆ ಹೇಳಿದಾಗ ಪುತ್ರಶೋಕ ಅವರನ್ನು ಈ ಮುಪ್ಪಿನ ಕಾಲದಲ್ಲಿ ಅದೆಷ್ಟು ವಿಚಲಿತರನ್ನಾಗಿಸಿದೆ ಎಂಬುದು ಅನುಭವಕ್ಕೆ ಬಾರದಿರದು.
ಹೇಳಿಕೆ ಪಡೆದ ಸಿಐಡಿ: ಕಳೆದ ನಾಲ್ಕು ದಿನಗಳಿಂದ ಗುಲ್ಬರ್ಗದಲ್ಲಿ ಠಿಕಾಣಿ ಹೂಡಿರುವ ಸಿಐಡಿ ಅಧಿಕಾರಿಗಳ ತಂಡ ಪಿಎಸ್‌ಐ ಬಂಡೆ ಸಾವಿನ ಹಿನ್ನೆಲೆಯಲ್ಲಿ ಇವರೊಂದಿಗೂ ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಹೇಳಿಕೆ ದಾಖಲು ಮಾಡಿಕೊಂಡಿದೆ.
  ಸಿಐಡಿ ಅಧಿಕಾರಿಗಳ ತಂಡದ ಜೊತೆ ಮುಖಾಮುಖಿಯಾದ ನಂತರ ಭೇಟಿ ಮಾಡಿದ 'ಕನ್ನಡಪ್ರಭ' ಜೊತೆ ಮಾತನಾಡಿದ ಕರಬಸಪ್ಪ ಮಾತುಗಳಲ್ಲಿ ಶೂಟೌಟ್ ಹಿಂದೇನೋ ಸಂಚು ಮಾಡಲಾಗಿತ್ತೇ ಎಂಬ ಶಂಕೆ ಅವರನ್ನು ಕಾಡುತ್ತಿರುವಂತಿತ್ತು. ಅಷ್ಟೇ ಅಲ್ಲ, ಇಡೀ ಘಟನೆಯೇ ಬನಾವಟಿ(ನಕಲಿ, ಸಂಚುಗಾರಿಕೆ) ಎಂದು ಹೇಳುವ ಮೂಲಕ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ಜರಿದರು.
ಮುಜ್ರೀಂ ಹಂಗೇ ಮುಂದವರದಾರಲ್ರಿ..: ನನ್ನ ಮಗ ಮಲ್ಲು ಸಾವಿಗೆ ಇಂಥವರ ಕಿರುಕಳ, ಸಂಶಯದ ವರ್ತನಾ ಕಾರಣ ಅಂತ ನೇರವಾಗಿಯೇ ಗೃಹ ಮಂತ್ರಿ, ಹಿರಿಯ ಅಧಿಕಾರಿಗಳಿಗೆ ನೇರವಾಗಿ ಹೇಳಿದ್ವಿ, ಅವರನ್ನ ಹೊರಗಿಟ್ಟು ತನಿಖೆ ಮಾಡ್ರಿ ಅಂತ ಕೋರಿಕೊಂಡಿದ್ವಿ, ವರ್ಗ ಮಾಡಲಾಗಿದೆ ಅಂದ್ರು, ಈಗ ನೋಡಿದ್ರ ಯಾರೂ ಎಲ್ಲೂ ಹೋಗಿಲ್ಲ. ನಾವು ಆರೋಪ ಮಾಡಿರುವ ಅಧಿಕಾರಿಗಳೆಲ್ಲಾರು ಗುಲ್ಬರ್ಗದಾಗೇ ಇದ್ದಾರ್ರಿ, ಹಂಗ ಸಿಐಡಿ ಮಂದಿ ತನಿಖೆ ನಡದದ. ಆರೋಪ ಹೊತ್ತವರ ಸಮ್ಮುಖದಲ್ಲೇ ಅದ್ಹ್ಯಂಗ ತನಿಖೆ ಪಕ್ಕಾ ನಡಿತದ್ರಿ, ನಾವು ಇಂಥಾ ತನಿಖೆ ನಂಬಬೇಕು ಹ್ಯಾಂಗ ಎಂದು ಕರಬಸಪ್ಪ ಪ್ರಶ್ನಿಸುತ್ತಾರೆ.
  ಸಿಐಡಿ ಅಧಿಕಾರಿ ಮಂದಿ ನನಗ ಬಕ್ಳ ಕೇಳಿದ್ರು, ಮಗಾ ಮನ್ಯಾಗ 6 ತಿಂಗಳಿಂದ ಮೇಲಾಧಿಕಾರಿಗಳ ಕಿರಿಕಿರಿ ವಿಷಯ ಅದ್ಹೇಗೆ ಹೇಳಿದ್ನೋ ಅದನ್ನೆಲ್ಲ ಇದ್ದಕ್ಕಿದ್ಹಂಗ ಹೇಳೀನಿ, ನಾನು ಬಿಟ್ಟಲ್ಲ ಬಿಡ್ರಿ. ನನ್ನ ಮಗಾನೆ ಸತ್ತು ಹೋಗ್ಯಾನ, ಇನ್ಯಾಕ ಅಂಜೋದ್ರಿ ನೇಕಿಯಿಂದ ಕೆಲ್ಸ ಮಾಡೋರಿಗೆ ಈ ರೀತಿ ಕಿರಿಕಿರಿಯಾಗಿ ಸಾವಾದ್ರ ಮುಂದ ಹ್ಯಾಂಗ್ರಿ.. ಪೊಲೀಸ್ ಕೆಲಸದಾಗ ಎಲ್ಲಾ ಪಕ್ಕಾ ಇರಬೇಕು, ಜನಾ ಪೊಲೀಸರಂದ್ರ ನಂಬ್ತಾರ. ಆದ್ರ ಈ ಗುದಮುರ್ಗಿ ಒಳ್ಗ ನನ್ನ ಮಗ ಏನ್ ನಂಬಿಕೊಂಡು ಹೋದ್ನೋ ಆ ನಂಬಿಕೇನೇ ಅವನಿಗೆ ಕೈ ಕೊಟ್ತು ಎಂದು ಕರಬಸಪ್ಪ ಕಣ್ಣೀರಿಟ್ಟರು.
ಹ್ಯಾಂಗ ಬೇಕ್ಹಂಗ ಹೇಳಿಕೆ ಕೊಡ್ಲಿಕತ್ತಾರ್ರಿ..?: ಮಲ್ಲು ಸಾವಾದ ನಂತರ ಐಜಿಪಿ ವಜೀರ್ ಅಹ್ಮದ್ ಹಿಡ್ಕೊಂಡು ಅನೇಕರು ಹ್ಯಾಂಗ ಬೇಕ್ಹಂಗ ಹೇಳಿಕೆ ಕೊಡ್ಲಿಕತ್ತಾರ್ರಿ, ಇದನ್ನೆಲ್ಲ ನೋಡಿದ್ರ ಬನಾವಟಿ ಅದೆಷ್ಟರ ಮಟ್ಟಿಗೆ ನಡದಿತ್ತು ಅಂತ ಊಹಿಸಲಿಕ್ಕೂ ಆಗೋವಲ್ತು ನೋಡ್ರಿ..
  ಕೆಲವು ವಿಚಾರದಾಗ ಐಜಿಪಿ ವಜೀರ್ ಅಹ್ಮದ್ ಅದು ನನ್ನ ಕೆಲಸ ಅಲ್ಲ, ಎಸ್ಪಿ ಕೆಲ್ಸ ಅಂತಾರ, ವಾಸ್ತವದಾಗ ನೋಡಿದ್ರ ಅವರೇ ಅಲ್ಲಿ ಹೋಗಿರ್ತಾರ ಹೀಂಗಾದ್ರ ಯಾರನ್ನ ನಂಬೋದು, ಅವರ ಹೇಳಿಕೆಯನ್ನೋ, ವಾಸ್ತವ ಚಿತ್ರಣವನ್ನೋ ಎನ್ನುವ ಕರಬಸಪ್ಪ, ಸರ್ಕಾರ ಬಂಡೆ ಕುಟುಂಬದ ಆರೋಪಕ್ಕೆ ಬೆಲೆ ಕೊಟ್ಟು ಹಿರಿಯ ಅಧಿಕಾರಿಗಳನ್ನು ದೂರ ಇಟ್ಟಾದರೂ ಸಿಐಡಿ ತನಿಖೆ ನಡೆಸಬೇಕಿತ್ತು. ಆಗ ನೇಕಿತನ ಎಲ್ಲರಿಗೂ ಗಮನಕ್ಕ ಬರ್ತಿತ್ತು ಎನ್ನುತ್ತಾರೆ.
ಇನ್ನಾರಿಗೂ ಹೀಗೆ ಆಗ್ಬಾರ್ದು: ನನಗಂತೂ ವಯಸ್ಸಾಯ್ತು, ಸೊಸೆ ಮಲ್ಲಮ್ಮ ಸಣ್ಣಾಕಿ ಇದ್ದಾಳ್ರಿ, ಶಿವಾನಿ, ಸಾಯಿ ದರ್ಶನ್ ಎಂಬಿಬ್ಬರು ಮಕ್ಕಳೊಂದಿಗೆ ಬದುಕು ಕಟ್ಟೋದೆ ಕಷ್ಟದ್ದಾಗೈತಿ. ವ್ಯವಸ್ಥೆಯೊಳಗಿನ ಬನಾವಟಿ ಮಗನನ್ನ ಬಲಿ ಪಡೀತು. ನನಗಂತೂ ಈ ಮುಪ್ಪಿನ ಕಾಲದಾಗ ಬಕ್ಕಳ ದುಃಖ ಕೊಟ್ಟ. ಮಗನಿಲ್ದದ ಮನಿ ಎದ್ದೋಡಸ್ಲಿಕತ್ತದ. ಬಂದದ್ದು ಬಂದ ಹಾಗೆನೇ ಸ್ವೀಕರಿಸಬೇಕಲ್ಲ.
  ಹಾಗಂತ ಬನಾವಟಿ ಮಾಡದವರು ಹಂಗ ಉಳ್ಕೊಬಾರ್ದು, ಮುಂದ ಮಲ್ಲುಗಾದ್ಹಂಗ ಇನ್ನಾರಿಗೂ ಆಗಬಾರ್ದು, ಅದಕ್ಕಾದ್ರೂ ನಾನು ಹೋರಾಟ ಮಾಡ್ತೀನಿ, ಅದೆಷ್ಟೇ ದುಃಖ ಆದ್ರೂ ಸಹಿಸ್ಕೋತೀನಿ. ಸಿಐಡಿ ತನಿಖೆ ಮ್ಯಾಗ ವಿಶ್ವಾಸವಿಲ್ಲ, ಸಿಬಿಐನವರಿಗೆ ತನಿಖೆ ಒಪ್ಪಿಸ್ಲಿ, ಮಗನ ಸಾವಿನ ಸುತ್ತ ಅದ್ಯಾವ ನಿಗೂಢತೆ ಕವಿದಿತ್ತು ಅನ್ನೋದು ಹೊರಗ ಬರ್ಲಿ ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಾರೆ.


-ಶೇಷಮೂರ್ತಿ ಅವಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement