ಪಿಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಜೇವರ್ಗಿ: ಅಕ್ರಮ ಮರಳು ಸಾಗಾಟ ಮಾಡುವ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿರುವ ಜೇವರ್ಗಿ ಪಿಎಸ್‌ಐ ಅವರ ವಿರುದ್ಧ ಕ್ರಮ ಕೈಗೊಳುವಂತೆ ಆಗ್ರಹಿಸಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ)ದ ಪದಾಧಿಕಾರಿಗಳು ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಕರವೇ ಕಾರ್ಯಕರ್ತರು ಅಕ್ರಮ ಮರಳು ಸಾಗಣೆಯನ್ನು ತಡೆದು ಸಂಬಂಧಪಟ್ಟ ಪೊಲೀಸ್ ಸಬ್ ಇನ್ಸಪೆಕ್ಟರ್ ಅವರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಆಗಮಿಸಿದ್ದ ಪಿಎಸ್‌ಐ ಅಕ್ರಮ ಮರಳು ಸಾಗಾಟ ಮಾಡುವವರಿಗೆ ಪ್ರೋತ್ಸಾಹ ರೀತಿಯಲ್ಲಿ ಮಾತನಾಡಿದ್ದಾರೆ. ಅಕ್ರಮ ಮರಳು ಸಾಗಣೆಯನ್ನು ತಡೆದು ಕರವೇ ಕಾರ್ಯಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಗುರುವಾರ ಬೆಳಿಗ್ಗೆ ತಾಲೂಕಿನ ಮದರಿ, ನರಿಬೋಳ, ರಾಜವಾಳ ಗ್ರಾಮಗಳಿಂದ ಅಕ್ರಮ ಮರಳು ಸಾಗಾಟ ನಡೆಸುತ್ತಿದ್ದ ವಾಹನಗಳು ನಮ್ಮ ಸಂಘಟನೆಯ ಪದಾಧಿಕಾರಿಗಳ ಗಮನಕ್ಕೆ ಬಂದಾಗ ತಕ್ಷಣ ಅದೇ ಸ್ಥಳದಿಂದ ಪಿಎಸ್‌ಐ ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಕರೆಗಳನ್ನು ಸ್ವೀಕರಿಸಿಲ್ಲವೆಂದು ಕಾರ್ಯಕರ್ತರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕು. ಪಿಎಸ್‌ಐ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕಾಧ್ಯಕ್ಷ ಸಾಯಬಣ್ಣ ಕವಾಲ್ದಾರ್, ರವಿಚಂದ್ರ ಗುತ್ತೇದಾರ್, ಸುನೀಲ್ ಚನ್ನೂರ, ಸಚಿನ್ ಸಾವಜಿ, ದೀಪಕ ಜಾಧವ, ಪ್ರಕಾಶ ಕೂಡಲಗಿ, ಸಂತೋಷ ಜೈನಾಪುರ, ಸುರೇಶ ತಳವಾರ, ಮಲ್ಲು ಕೂಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.