ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೂಲ ಸಮಸ್ಯೆಗಳಿಗೆ ಕಲಂ 371(ಜೆ) ಮದ್ದರೆಯಲಿ

Vishwanath S
Updated On : 29 Jan 2014, 11:23 am

ಕನ್ನಡಪ್ರಭ ವಾರ್ತೆ  ಗುಲ್ಬರ್ಗ  ಜ.28
ಸಂವಿಧಾನದ ಕಲಂ 371(ಜೆ) ಅಂದರೆ ಕೇವಲ ರಸ್ತೆ, ಚರಂಡಿ ನಿರ್ಮಾಣ ಅಲ್ಲ. ಹೈ-ಕ ಜನರ ಸರ್ವತೋಮುಖ ಪ್ರಗತಿಗೆ ಇದು ಬಲ- ಬೆಂಬಲವಾಗಬೇಕು. ಅಂತಹ ಕಾರ್ಯಕ್ರಮ, ಯೋಜನೆಗಳನ್ನು ಈ ಕಲಂ ಹೊಂದುವ ಮೂಲಕ ಪ್ರಗತಿ ಮೇಲೆ ಹೊಸಬೆಳಕು ಚೆಲ್ಲುವಂತಾಗಬೇಕೆಂದು ಕನ್ನಡ ವಿವಿ ಹಂಪಿ ವಿಶ್ರಾಂತ ಪ್ರಾಧ್ಯಾಪಕ ಡಾ. ಟಿ.ಆರ್. ಚಂದ್ರಶೇಖರ ಹೇಳಿದರು.
ಗುಲ್ಬರ್ಗದ ಎಚ್ಕೆಸಿಸಿಐ ಸಭಾಂಗಣದಲ್ಲಿ ಜ.28ರಂದು ಆರಂಭವಾಗಿರುವ ಕಲಂ 371(ಜೆ) ಮುಂದಿರುವ ಸವಾಲುಗಳು ಎಂಬ ವಿಷಯದ ಮೇಲಿನ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದಿರುವಿಕೆ ಹೊಡೆದೋಡಿಸಬೇಕು: ಕಲಂ 371(ಜೆ) ಬಂತು ಅಂದಾಕ್ಷಣ, ಈ ಭಾಗದಲ್ಲಿನ ರಸ್ತೆಗೇ ದುಡ್ಡು ಸುರಿಯುವ, ಇಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ, ಇನ್ನೇನೋ ಕಟ್ಟಡಗಳನ್ನು ನಿರ್ಮಿಸುವಲ್ಲಿಯೇ ಕಾಲ, ಹಣ ವ್ಯಯ ಮಾಡುವ ಕೆಲಸವಾಗಬಾರದು. ಇದಕ್ಕೂ ಮಿಗಿಲಾಗಿ ಈ ನೆಲದ ನಿವಾಸಿಗಳು, ಶತಮಾನಗಳಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಅಂಥವರನ್ನು ಆವರಿಸಿರುವ ಹಿಂದುಳಿದಿರುವಿಕೆ ಹೊಡೆದೋಡಿಸುವ ಕೆಲಸವಾಗಬೇಕು. ಅಂತಹ ಯೋಜನೆಗಳಿಗೆ ಈ ಕಲಂ ಒತ್ತಾಸೆಯಾಗಿ ನಿಲ್ಲಬೇಕು. ಹೈ-ಕ 6 ಜಿಲ್ಲೆಗಳ ಜನರ ಆರ್ಥಿಕ, ಸಾಮಾಜಿಕ ಪ್ರಗತಿಗೆ ಪೂಕವಾಗಿರುವಂತಹ ಯೋಜನೆಗಳನ್ನು ಹೆಣೆಯಬೇಕು ಎಂದರು.
ಈ ನೆಲದ ಪ್ರಗತಿಗೆ ಕಲಂ 371(ಜೆ) ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ವಿವರಿಸಿದ ಚಂದ್ರಶೇಖರ, ಇಲ್ಲಿ ಕಾರ್ಮಿಕರು ಕೆಲಸ ಅರಸಿ ಗುಳೆ ಹೋಗುವುದು ಹೆಚ್ಚು. ಗುಳೆ ತಪ್ಪಿಸಬೇಕು, ಕಾರ್ಮಿಕರಿದ್ದಲ್ಲಿಗೆ ಕೆಲಸ ಒದಗಿಸುವ ಯೋಜನೆ ಒಳಗೊಳ್ಳಬೇಕು. ತಲೆ ಎತ್ತುತ್ತಿರುವ ಹೈ-ಕ ಪ್ರಾದೇಶಿಕ ಮಂಡಳಿಯಡಿಯಲ್ಲಿ ಇಂತಹ ಸೃಜನಾತ್ಮಕ ಯೋಜನೆಗಳನ್ನು ರೂಪಿಸುವ ಕೆಲಸವಾಗಬೇಕು ಎಂದು ಹೇಳಿದರು.
ಸದ್ವಿನಿಯೋಗವಾಗಲಿ: ಎಚ್ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಮಾತನಾಡಿ, ಕಲಂ 371(ಜೆ) ಅನುಷ್ಠಾನಕ್ಕೆ ಬರುವ ಮುನ್ನ ಈ ಭಾಗದಲ್ಲಿ ನಡೆದ ಹೋರಾಟಗಳನ್ನು ವಿವರಿಸುತ್ತ ಕಲಂ ಈಗ ದೊರಕಿದೆ. ಅದು ಸದ್ವಿನಿಯೋಗವಾಗಬೇಕು. ಅಧ್ಯಕ್ಷರಾದಿಯಾಗಿ ಹೈ-ಕ ಪ್ರಾದೇಶಿಕ ಮಂಡಳಿಯ ಎಲ್ಲರೂ ಸೇರಿ ಪ್ರಗತಿಗೆ ಅನುಕೂಲವಾಗುವಂತಹ ಯೋಜನೆಗಳನ್ನೇ ಆದ್ಯತೆಯಲ್ಲಿ ಕೈಗೆತ್ತಿಕೊಳ್ಳುವಂತಾಗಬೇಕು ಎಂದರು.
ವಿವಿಧ ಗೋಷ್ಠಿ: ಚೇಂಬರ್ ಕಾರ್ಯದರ್ಶಿ ಬಸವರಾಜ ಹಡಗಿಲ್, ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಡಾ. ಮೀನಾಕ್ಷಿ ಬಾಳಿ, ಕೆ.ನೀಲಾ ಉಪಸ್ಥಿತರಿದ್ದರು. ಉದ್ಘಾಟನೆ  ನಂತರ ಗೋಷ್ಠಿಗಳಲ್ಲಿ ಜನರ ನೆಲೆಯಲ್ಲಿ ಕಲಂ 371 (ಜೆ) ವಿಷಯವಾಗಿ ಸಂಗೀತಾ ಕಟ್ಟಿ, ದುಡಿಯುವ ವರ್ಗದ ನೆಲೆಯಲ್ಲಿ ಕಲಂ 371(ಜೆ) ವಿಷಯವಾಗಿ ಕೆ.ನೀಲಾ, ದಲಿತರು- ಶೋಷಿತರ ನೆಲೆಯಲ್ಲಿ ಕಲಂ 371(ಜೆ) ವಿಷಯವಾಗಿ ಡಾ. ಬಿಎಂ ಪುಟ್ಟಯ್ಯ, ಮಹಿಳೆಯರ ನೆಲೆಯಲ್ಲಿ ಕಲಂ 371(ಜೆ) ವಿಷಯವಾಗಿ ಡಾ. ಮೀನಾಕ್ಷಿ ಬಾಳಿ ಮಾತನಾಡಿದರು. ಅಭಯ್ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.
ಇಂದಿನ ಗೋಷ್ಠಿಗಳು: ಜ.29ರ ಬೆಳಗಿನ ಗೋಷ್ಠಿಗಳಲ್ಲಿ ಮಾಧ್ಯಮ, ಮಕ್ಕಳು, ಮಾನವಾಭಿವೃದ್ಧಿ, ಶಿಕ್ಷಣ- ಉದ್ಯೋಗದ ನೆಲೆಯಲ್ಲಿ ಕಲಂ 371(ಜೆ) ಹೇಗೆ ಬಳಕೆಯಾಗಬೇಕು ಎಂಬುದರ ಮೇಲೆ ರಾಘವೇಂದ್ರ, ಡಾ. ಛಾಯಾ ದೇಗಾಂವ್ಕರ್, ಡಾ. ಎಚ್.ಡಿ. ಪ್ರಶಾಂತ್ ಸೇರಿದಂತೆ ಹಲವರು ಬೆಳಕು ಚೆಲ್ಲಲಿದ್ದಾರೆ. ಬಳ್ಳಾರಿ ಸಾಮಾಜಿಕ ಕಾರ್ಯಕರ್ತ ಸಿರಿಗಿರೆ ಪನ್ನರಾಜು ಅಧ್ಯಕ್ಷತೆ ವಹಿಸುವರು.
ಮಧ್ಯಾಹ್ನದ ಗೋಷ್ಠಿಗಳಲ್ಲಿ ಡಾ. ಎ.ಶ್ರೀಧರ್, ಡಾ. ಶರಣಪ್ಪ ಸೈದಾಪೂರ, ಡಾ. ಜನಾರ್ಧನ, ಡಾ. ಸಂತೋಷ ಮಂಗಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸ್ಥಳೀಯ ಸರ್ಕಾರಗಳು- ಜನಪ್ರತಿನಿಧಿಗಳ ನೆಲೆಯಲ್ಲಿ, ಆರೋಗ್ಯದ ನೆಲೆಯಲ್ಲಿ ಕಲಂ 371(ಜೆ) ವಿಷಯವಾಗಿ ಮಾತನಾಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement