ವಿದ್ಯುತ್; ಉದಾಸೀನತೆ ಸಲ್ಲದು
ಶಹಾಪುರ: ವಿದ್ಯುತ್ ವಿಷಯದಲ್ಲಿ ಕರ್ತವ್ಯನಿರತ ಸಿಬ್ಬಂದಿಗಳು ಎಲ್ಲ ಬಲ್ಲವರೆಂದು ಅತಿ ವಿಶ್ವಾಸ ಸಲ್ಲದು. ವಿದ್ಯುತ್ ಕಾರ್ಯದಲ್ಲಿ ಎಚ್ಚರಿಕೆ ಅಗತ್ಯ. ಇದರಿಂದ ಆಕಸ್ಮಿಕವಾಗಿ ಆಗುವ ವಿದ್ಯುತ್ ಅವಘಡ ತಪ್ಪಿಸಬಹುದು ಎಂದು ಜೆಸ್ಕಾಂ ಅಧೀಕ್ಷಕ ಅಭಿಯಂತರ ಲಕ್ಷ್ಮಣ ಚವ್ಹಾಣ ತಿಳಿಸಿದರು.
ಬಿ.ಗುಡಿ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜೆಸ್ಕಾಂನಿಂದ ಆಯೋಜಿಸಿದ್ದ ವಿದ್ಯುತ್ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಕರ್ತವ್ಯದಲ್ಲಿದ್ದಾಗ ಸಿಬ್ಬಂದಿ ಒತ್ತಡಗಳನ್ನು ಬದಿಗಿರಿಸಿ ಕೆಲಸದ ಬಗ್ಗೆ ಏಕಾಗ್ರತೆ ವಹಿಸಬೇಕು. ಗಾಳಿ, ನೀರು ಎಷ್ಟು ಮುಖ್ಯವೋ ವಿದ್ಯುತ್ ಕೂಡಾ ಅತ್ಯಂತ ಮುಖ್ಯ.
ಸಿಬ್ಬಂದಿ ಸಂದರ್ಭಕ್ಕೆ ತಕ್ಕಂತೆ ಸುರಕ್ಷತಾ ಸಾಧನಗಳನ್ನು ಉಪಯೋಗಿಸಬೇಕು. ಗ್ರಾಹಕರು ವಿದ್ಯುತ್ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಮಾಹಿತಿ: ವಿದ್ಯುತ್ ಬಳಕೆದಾರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ನಡೆಯಬೇಕು. ಅದರ ಬಳಕೆ, ಜಾಗೃತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವ ರೀತಿಯಲ್ಲಿ ಪ್ರಬಂಧ ಚರ್ಚಾ ಸ್ಪರ್ಧೆ, ಭಾಷಣಗಳು ನಡೆದು ವಿದ್ಯುತ್ ಬಗ್ಗೆ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಎಂದರು. ಸಂಘಟನಾ ಕಾರ್ಯದರ್ಶಿ ಜೆಸ್ಕಾಂನ ಟಿ. ಶ್ರೀನಿವಾಸ ಕರ್ತವ್ಯನಿರತರ ಕುಂದುಕೊರತೆ ಕುರಿತು ಅಭಿಪ್ರಾಯ ಹಂಚಿಕೊಂಡು, ಇತ್ತೀಚಿಗೆ ಜೆಸ್ಕಾಂದಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಪರಿಣಿತರ ಕೊರತೆ ಎದ್ದು ಕಾಣುತ್ತಿದೆ. ಇದರಿಂದ ಅವಘಡ ಹೆಚ್ಚಾಗಿ ಪ್ರಾಣ ಹಾನಿಯಾಗುತ್ತಿವೆ ಎಂದರು
ಶ್ಲಾಘನೆ: ಕೃಷಿ ಮಾಹಾವಿದ್ಯಾಲಯದ ಪ್ರಮುಖರಾದ ಡಿ.ಎಂ. ಚಂದರಗಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ವಿದ್ಯುತ್ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಅವರ ಜವಾಬ್ದಾರಿ ಕುರಿತಂತೆ ಶ್ಲಾಘಿಸಿದರು. ಕಾರ್ಯ ನಿರ್ವಾಹಕ ನಾಗರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯುತ್ ಉಳಿತಾಯದ ಬಗ್ಗೆ ತಿಳಿಸಿದರು.
ಜೆಸ್ಕಾಂ ಜಾಗೃತಿ ದಳದ ರಾಜಶೇಖರ ಬಿಳವಾರ, ಪ್ರಮುಖ ಬಸವರಾಜ, ಶಾಖಾಧಿಕಾರಿಗಳಾದ ಪರಮೇಶ್ವರ, ಶಿವುಕುಮಾರ, ಮಹಾಂತೇಶ, ಎಕ್ಬಾಲ, ಮಲ್ಲಿಕಾರ್ಜುನ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ಅಡಿಕೆ, ಜೆಸ್ಕಾಂ ನೌಕರರು ಉಪಸ್ಥಿತರಿದ್ದರು. ಶಿವಾನಂದ ಶಾಸ್ತ್ರೀ ಪ್ರಾರ್ಥಿಸಿ, ಶಿವರುದ್ರಪ್ಪಗೌಡ ಮದ್ರಿಕಿ ನಿರ್ವಹಿಸಿದರು.