ಬಸ್ ನಿಲ್ದಾಣಕ್ಕೆ ಅನಾಥ ಪ್ರಜ್ಞೆ!
ಶಹಾಪುರ: ಬಹು ನಿರೀಕ್ಷಿತ ಹೈಟೆಕ್ ಬಸ್ ನಿಲ್ದಾಣ ಪಟ್ಟಣದ ಸಾರ್ವಜನಿಕರ ಸೇವೆಗೆ ಸಜ್ಜಾಗಿ ವರ್ಷಗಳೇ ಉರುಳಿದರೂ ಪ್ರಯಾಣಿಕರಿಲ್ಲ, ಸೌಲಭ್ಯಗಳಿಲ್ಲ. ಅರೆಬರೆ ಕಾಮಗಾರಿ, ಬಸ್‌ಗಳ ಓಡಾಟವಿಲ್ಲದೆ ಹೈಟೆಕ್ ಎಂಬ ಹೆಸರಿಗೆ ಗ್ರಹಣ ಬಡಿದಂತಾಗಿದೆ.
ಬಸ್ ನಿಲ್ದಾಣ ಪ್ರಾರಂಭವಾದಾಗಿನಿಂದ ದಿನಗಳೆದಂತೆ ಸೌಲಭ್ಯಗಳು ಸಿಗಬಹುದು ಎಂಬ ಆಶಾವಾದ ಹೊಂದಿದ ಪ್ರಯಾಣಿಕರಿಗೆ ಸಂಪೂರ್ಣ ನಿರಾಸೆಯೆಂಬಂತಾಗಿದೆ.
ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕೊರತೆಯಿಂದ ಕ್ಯಾಂಟಿನ್ ಪ್ರಾರಂಭವಾಗದೇ ಖಾಲಿ ಬಿದ್ದಿದೆ. ಉಳಿದಂತೆ ಬಹಳಷ್ಟು ಅಂಗಡಿಗಳು ಕೆಲವರು ಟೆಂಡರ್ ಮೂಲಕ ಪಡೆದಿದ್ದರೂ ವ್ಯವಹಾರಕ್ಕೆ ಅನುಕೂಲವಿಲ್ಲದೆ ಬಾಡಿಗೆ ಕಟ್ಟುತ್ತಾ ದಿನ ದೂಡುತ್ತಿದ್ದಾರೆ. ಶೌಚಾಲಯಗಳಂತೂ ಅವ್ಯವಸ್ಥೆಯ ಆಗರ. ರಾತ್ರಿ 9 ಗಂಟೆಯಾದರೆ ಸಭ್ಯರು ಬಸ್ ನಿಲ್ದಾಣದೊಳಗೆ ಬರಲು ಹೆದರಿಕೆಯಾಗುವಂಥ ವಾತಾವರಣ. ಕಾರಣ, ಇದ್ದ ಎರಡು- ಮೂರು ಅಂಗಡಿಗಳು ವ್ಯಾಪಾರವಿಲ್ಲದೆ ಮುಚ್ಚಿಕೊಂಡು ಹೋಗುತ್ತಿವೆ. ಇನ್ನು ಬಸ್ ನಿಲ್ದಾಣವೆಂಬುದು ನಿರಾಶ್ರಿತರ ಪುಢಾರಿಗಳ ತಾಣವಾಗುತ್ತಿದೆ ಎಂಬುದಕ್ಕೆ ಅಲ್ಲಲ್ಲಿ ಬಿದ್ದಿರುವ ಮದ್ಯ ಸೇವನೆಯ ಬಾಟಲಿಗಳು, ಎಲ್ಲೆಂದರಲ್ಲಿ ಉಗುಳಿ ಹೊಲಸು ಮಾಡಿರುವುದು. ಛಾವಣಿ ಮೇಲೆ ಅನೈತಿಕ ಚಟುವಟಿಕೆಯ ಸ್ಥಳವಾಗಿದೆ.
ಬಸ್‌ಗಳು ಬರುತ್ತಿಲ್ಲ: ಯಾದಗಿರಿ ಡಿಪೋದ ಕೆಲವು ಬಸ್‌ಗಳು, ಸಿಂದಗಿ ಮಾರ್ಗದ ಬಸ್ಸುಗಳು ಹೊಸ ಬಸ್ ನಿಲ್ದಾಣಕ್ಕೆ ಬರಲು ಅಲರ್ಜಿ ಎಂಬಂತಾಗಿದ್ದು ಹಳೇ ಬಸ್ ನಿಲ್ದಾಣದಿಂದಲೇ ಹೋಗುತ್ತಿವೆ. ಕೆಲವು ಪ್ರಯಾಣಿಕರಿಗೆ ಹಳೇ ಬಸ್ ನಿಲ್ದಾಣವೇ ಗತಿ ಎಂಬಂತಾಗಿದೆ. ಕೆಲವು ನಿರ್ವಾಹಕರು, ಚಾಲಕರು ಹಳೇ ಬಸ್ ನಿಲ್ದಾಣದಲ್ಲಿ ಇಳಿಯಲು ತಿಳಿಸುತ್ತ ಹೊಸ ಬಸ್ ನಿಲ್ದಾಣದೊಳಗೆ ಬರಲು ಕೀಳರಿಮೆ ಎಂದೇ ಭಾವಿಸಿದ್ದಾರೆ. ಹೀಗಾಗಿ ರಾತ್ರಿ ದೂರದ ಊರಿಗೆ ಪ್ರಯಾಣ ಮಾಡುವವರು ಹಳೆ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾರೆ.
ಅರ್ಧಮರ್ಧ ಕಾಮಗಾರಿ: ಬಸ್ ನಿಲ್ದಾಣದೊಳಗೆ ಹಲವಾರು ಕಾಮಗಾರಿಗಳು ಬಾಕಿ ಉಳಿದಿದ್ದರೂ ಸಾರಿಗೆ ಸಂಸ್ಥೆ ಇದರ ಬಗ್ಗೆ ಕಾಳಜಿ ವಹಿಸದೇ ದಿನ ದೂಡುತ್ತಿದೆ. ಎಲ್ಲೆಂದರಲ್ಲಿ ಹಾಸುಗಲ್ಲುಗಳು ಹಾಗೇ ಉಳಿದಿವೆ. ಸರಿಯಾದ ವಿದ್ಯುತ್ ಸೌಕರ್ಯ, ಕುಡಿಯುವ ನೀರಿನ ಸೌಲಭ್ಯದ ಕೊರತೆ ಕಾಡುತ್ತಿದೆ. ಹೊಸ ಬಸ್ ನಿಲ್ದಾಣಕ್ಕೆ ಹೊಸತನ ತಂದು ಪ್ರಯಾಣಿಕರಿಗೆ ಸರಿಯಾದ ಸೌಲಭ್ಯ ನೀಡಬೇಕೆಂಬ ಇಚ್ಛಾಶಕ್ತಿ ಕೊರತೆ ಎಲ್ಲರಲ್ಲಿ ಕಾಡುತ್ತಿದೆ.
ಕಸ ನಿರ್ವಹಣೆಯಲ್ಲಿ ಅವ್ಯವಸ್ಥೆ: ಬಸ್ ನಿಲ್ದಾಣದೊಳಗಿನ ಆವರಣ ಸ್ವಚ್ಛತೆಯ ಕೆಲಸದಿಂದ ವಂಚಿತವಾಗಿದೆ. ಮಹಾತ್ಮರ ಫೋಟೋಗಳಿಗೆ ಧೂಳು ಆವರಿಸಿದ್ದು ಯಾರ ಗಮನಕ್ಕೆ ಬಾರದಂತಿದೆ. ಯಾವ ಮೂಲೆಗಳಲ್ಲಿ ನೋಡಿದರೂ ಅವ್ಯವಸ್ಥೆ ಎದ್ದು ಕಾಣುತ್ತಿದೆ. ಇನ್ನಾದರೂ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಹೈಟೆಕ್ ಬಸ್ ನಿಲ್ದಾಣ ಹಾಳುಗೆಡುಹದೆ ಇದೊಂದು ನಿರಾಶ್ರಿತರ ತಾಣವಾಗಲು ಬಿಡದೆ ಪ್ರಯಾಣಿಕರಿಂದ ಸದಾಕಾಲ ತುಂಬಿರುವಂತೆ ಎಲ್ಲಾ ಬಸ್ಸುಗಳು ಕಡ್ಡಾಯವಾಗಿ ಬಂದು ಹೋಗುವಂತೆ, ವ್ಯಾಪಾರ ವಹಿವಾಟುಗಳಿಗೆ ಉತ್ತೇಜನವಾಗುವಂತೆ ಕ್ರಿಯಾತ್ಮಕವಾಗಿ ಸ್ಪಂದಿಸಿ ಹೈಟೆಕ್ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ವರೂಪ ನೀಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.