ಸ್ವಾಮಿ ಅಮಾನತಿಗೆ ಆಗ್ರಹ
ಗುಲ್ಬರ್ಗ: ವಿಕಲಚೇತನರನ್ನು ಭಿಕ್ಷುಕರೆಂದು ಹಗುರವಾಗಿ ಮಾತನಾಡಿರುವ ರಾಜ್ಯ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕರನ್ನು ಅಮಾನತುಗೊಳಿಸಲು ಆಗ್ರಹಿಸಿ ವಿಕಲಚೇತನರು ಪ್ರತಿಭಟನೆ ನಡೆಸಿದರು.
ಕರ್ನಾಟಕ ವಿಕಲಚೇತನರ ಹಾಗೂ ವಿವಿದೋದ್ಧೇಶ ಎಂ.ಆರ್.ಡಬ್ಲೂ ಮತ್ತು ಗ್ರಾಮೀಣ ಪುನರ್ವಸತಿ ವಿ.ಆರ್. ಡಬ್ಲೂ ಕಾರ್ಯಕರ್ತರ ಸಾಜ್ಯ ಒಕ್ಕೂಟದ ನಿರ್ದೇಶಕ ಬಸವರಾಜ ಹಡಪದ ಬಿದನೂರ ಹಾಗೂ ಜಿಲ್ಲಾಧ್ಯಕ್ಷ ಶ್ರೀಮಂತ ಮಳಖೇಡ ನೇತೃತ್ವದಲ್ಲಿ ವಿಕಲಾಂಗರು ಮತ್ತು ಬಿ.ಎಂ.ಡಬ್ಲೂ ಇತರರು ರ್ಯಾಲಿ ನಡೆಸಿದರು.
ಹಂಪಿ ಉತ್ಸವದಲ್ಲಿ ಮಾತನಾಡಿ, ವಿಕಲಚೇತನರು ಭಿಕ್ಷುಕರೆಂದು ಜರಿದ ನಿರ್ದೇಶಕ ಜಯವಿಭವ ಸ್ವಾಮಿ ಅವರು ಈ ಹಿಂದೆ ಮಲೆಯ ಮಹಾದೇಶ್ವರ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾಗ ನಡೆಸಿದರೆನ್ನಲಾದ ಅವ್ಯವಹಾರ ಕುರಿತು ತನಿಖೆ ನಡೆಸಬೇಕೆಂದು ವಿಕಲಚೇತನರು ಆಗ್ರಹಿಸಿದರು. ಅವರ ವಿರುದ್ಧ ಕ್ರಮ ಕೈಗೊಳ್ಳದೆ ಇದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಲಾಖೆಯ ಪರವಾಗಿ ಕೆಲಸ ನಿರ್ವಹಿಸುತ್ತಿರುವ ಪುನರ್ವಸತಿ ಕಾರ್ಯಕರ್ತರ ಗೌರವಧನ ಹೆಚ್ಚಿಸಬೇಕು, ಅಪಘಾತದಲ್ಲಿ ಅಥವಾ ಆಕಸ್ಮಿಕವಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು, ಮಹಿಳಾ ಪುನರ್ವಸತಿ ಕಾರ್ಯಕರ್ತರು ಹೆರಿಗೆ ದಿನಗಳಲ್ಲಿ ಗೌರವಧನ ಸಹಿತ ರಜೆ ನೀಡಬೇಕು ಹಾಗೂ ಸೇವೆ ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಾನಪ್ಪ ಹೊನ್ನಳ್ಳಿ, ಖಾಸಿಂಸಾಬ ಡೊಂಗರಗಾಂವ, ರಾಜಕಿಶೋರ ಮಾಲಿಪಾಟೀಲ್ ಹಣಮಂತ ಏರಿ, ಲಕ್ಷ್ಮಣ ಬೋಸಲೆ, ಝರೀನಾ ಬೇಗಂ, ಶಂಕ್ರಮ್ಮ, ಶೈಲಜಾ ಬುಗ್ಗಮ್ಮ ಸೇರಿದಂತೆ ಇನ್ನಿತರು ಪಾಲ್ಗೊಂಡಿದ್ದರು.