ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಪಟ ಸ್ವಾಮಿಗೆ ಯುವತಿ 'ಬಲಿ'

Vishwanath S
Updated On : 1 Feb 2014, 11:15 am

ಕ.ಪ್ರ. ವಾರ್ತೆ ,  ಸಿಂಧನೂರು ,  ಜ.31
ಮಹಾರಾಷ್ಟ್ರದ ಯಾತ್ರಾಸ್ಥಳ ಫಂಡರಾಪುರಕ್ಕೆ ಕುಟುಂಬದೊಂದಿಗೆ ತೆರಳಿದ್ದ ನಗರದ ಮಹೆಬೂಬಿಯಾ ಕಾಲೋನಿಯ ಯುವತಿ 'ಹತ್ಯಾ'ಚಾರಕ್ಕೊಳಗಾದ ಘಟನೆ ನಡೆದಿದೆ.
ನಗರದ ದುದ್ದುಪುಡಿ ಮಹಿಳಾ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಶ್ರೀದೇವಿ(17) ಕೊಲೆಯಾದ ದುರ್ದೈವಿ. ಜ.26ರಂದು ಫಂಡರಾಪುರದ ದೇವಸ್ಥಾನಕ್ಕೆ ಪಾಲಕರೊಂದಿಗೆ ತೆರಳಿದ್ದ ಶ್ರೀದೇವಿ 27ರಂದು ಕಾಣೆಯಾಗಿದ್ದಾಳೆ. ಪಾಲಕರು ಮಗಳನ್ನು ದಿನವಿಡೀ ಹುಡುಕಾಡಿ ಕೊನೆಗೆ ಫಂಡರಪುರ ಠಾಣೆಯಲ್ಲಿ ಮಗಳು ಕಾಣೆಯಾಗಿರುವ ಕುರಿತು ದೂರು ಸಲ್ಲಿಸಿ, ನಗರಕ್ಕೆ ವಾಪಸ್ಸಾಗಿದ್ದಾರೆ.
ಜ.30ರಂದು ಮಧ್ಯಾಹ್ನ ಪೊಲೀಸ್ ಠಾಣೆಯಿಂದ ಶ್ರೀದೇವಿಯ ಶವ ಸಾಂಗ್ಲಿಯ ಹೊಲವೊಂದರಲ್ಲಿ ಪತ್ತೆಯಾಗಿರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ಬಂದಿದೆ. ಯುವತಿಯ ಮೃತದೇಹವನ್ನು ಶುಕ್ರವಾರ ಸಾಂಗ್ಲಿಯಿಂದ ಆಕೆಯ ಮನೆಗೆ ತರಲಾಗಿದೆ.
ಮುಗಿಲುಮುಟ್ಟಿದ ರೋದನ: ಯುವತಿಯ ಮೃತದೇಹ ಮನೆಗೆ ತರುತ್ತಿದ್ದಂತೆ ತಾಯಿ, ಬಂಧುಗಳು, ಕಾಲೋನಿಯ ನಿವಾಸಿಗಳು ರೋದಿಸುತ್ತಿದ್ದುದು ಮುಗಿಲು ಮುಟ್ಟಿತ್ತು. ಬಹುತೇಕ ಕೂಲಿಕಾರ್ಮಿಕ ಕುಟುಂಬಗಳೇ ನೆಲೆಸಿರುವ ವಾರ್ಡ್‌ನಲ್ಲಿ ನೂರಾರು ಮಹಿಳೆಯರು ನೆರೆದು ಕಣ್ಣೀರಿಟ್ಟರು.
ಸ್ವಾಮಿಯ ಕೈವಾಡ ಶಂಕೆ: ಫಂಡರಾಪುರ ಮೂಲದ ವ್ಯಕ್ತಿಯೊಬ್ಬ ತಾನು ಸ್ವಾಮಿಯೆಂದು ಮೃತ ಯುವತಿಯ ಕುಟುಂಬದೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ. ಆಗಾಗ ಇವರ ಮನೆಗೆ ಬಂದು ಹೋಗುತ್ತಿದ್ದ. ಆತ ನಿಮ್ಮ ಮನೆಗೆ ಕಂಟಕವಿದೆ, ಅದರ ಪರಿಹಾರಕ್ಕೆ ಫಂಡರಾಪುರದಲ್ಲಿ ಪೂಜೆ ಸಲ್ಲಿಸಬೇಕೆಂದು ಹೇಳಿದ್ದ ಎನ್ನಲಾಗುತ್ತಿದೆ.
ಆತ ಹೇಳಿದಂತೆ ಕುಟುಂಬ ಪಂಡರಾಪುರಕ್ಕೆ ತೆರಳಿದೆ. ನಂತರ ಯುವತಿ ಕಾಣೆಯಾಗಿ ಶವವಾಗಿ ಪತ್ತೆಯಾಗಿದ್ದಾಳೆ. ಆದರೆ ಸ್ವಾಮಿ ಫಂಡರಾಪುರದಲ್ಲಿ ಮೊದಲ ದಿನ ಭೇಟಿಯಾದವನು, ನಂತರ ನಾಪತ್ತೆಯಾದ ಎಂದು ಮೃತಳ ತಾಯಿ ರೇಣುಕಮ್ಮ ಹೇಳುತ್ತಾರೆ.
ಈ ಕುರಿತು ಫಂಡರಾಪುರ ಪೊಲೀಸ್ ಠಾಣೆಯಲ್ಲಿ ಯುವತಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಸಿಂಧನೂರು ಶಹರ್ ಠಾಣೆಯ ಪಿಎಸ್‌ಐ ಬಾಳನಗೌಡ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement