ಹಂತಹಂತವಾಗಿ ಗುಲ್ಬರ್ಗ ವಿಭಾಗೀಯ ಕಚೇರಿ
ನಾಲವಾರ(ಶಹಾಬಾದ್): ಯಾದಗಿರಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರೈಲ್ವೆ ಬೋಗಿ ಕಾರ್ಖಾನೆಗೆ ಫೆ. 9ರಂದು ಶಿಲಾನ್ಯಾಸ ನೆರವೇರಿಸಲಾಗುವುದು. ಪ್ರಸಕ್ತ ವರ್ಷ 35 ಕೋಟಿ ವೆಚ್ಚದಿಂದ ಫಿನಿಷಿಂಗ್ ಕೆಲಸ ಆರಂಭಿಸಲಾಗಿದೆ. ಗುಲ್ಬರ್ಗದಲ್ಲಿ ರೇಲ್ವೆ ಆಡಳಿತ ಕಚೇರಿ ಪ್ರಾರಂಭಿಸಿದ್ದು, ಅದು ಮುಂದಿನ ದಿನಗಳಲ್ಲಿ ಹಂತಹಂತವಾಗಿ ರೇಲ್ವೆ ವಿಭಾಗವಾಗಲಿದೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಅವರು ಚಿತ್ತಾಪುರ ತಾಲೂಕಿನ ಸುಕ್ಷೇತ್ರ ನಾಲವಾರದ ಕೋರಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತ ಕೇಂದ್ರದಲ್ಲಿ ಹಲವು ಖಾತೆಗಳ ಸಚಿವರಾದ ನಂತರ ಪ್ರತಿ ವಾರ ಸಚಿವ ಸಂಪುಟ, ಉಪ ಸಮಿತಿ ಸಭೆ, ರೇಲ್ವೆ, ಕಾರ್ಮಿಕ ಇಲಾಖೆಯ ಕಚೇರಿ ಕೆಲಸದ ಒತ್ತಡದೊಂದಿಗೆ ಇಡೀ ದೇಶದಲ್ಲಿನ ಇಲಾಖೆ ಸಮಸ್ಯೆಗಳನ್ನು ಗಮನಿಸಬೇಕಾಗಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯದ ಲೋಕಸಭೆ ಅಭ್ಯರ್ಥಿಗಳ ಪರಿಶೀಲನೆ ಜವಾಬ್ದಾರಿಯಿಂದಾಗಿ ಜನರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಇಂದು ನಾಲವಾರ ಮಠಕ್ಕೆ ಬರುವ ನೆಪದಲ್ಲಿ ನಮಗೆ ನಿಜವಾದ ದೇವರಾದ ಜನರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ನನಗೆ ಸಿಕ್ಕ ಅವಕಾಶದಲ್ಲಿ ಹೈ.ಕ.ಪ್ರದೇಶಕ್ಕೆ ಕಲಂ. 371 ಜೆ ಐತಿಹಾಸಿಕ ತಿದ್ದುಪಡಿ, ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್ಐ ಆಸ್ಪತ್ರೆ, ರಾಷ್ಟ್ರೀಯ ಹೆದ್ದಾರಿ, 5-7 ಸಾವಿರ ಕೋಟಿ ರೂ. ವೆಚ್ಚದ ಸನ್ನತಿ, ನಾರಾಯಣಪುರ ನೀರಾವರಿ ಯೋಜನೆಗಳನ್ನು ತರಲಾಗಿದ್ದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೊಸ ರೈಲು, ರೈಲ್ವೆ ಇಲಾಖೆಯಲ್ಲಿ ಹೊಸ ಯೋಜನೆಗಳನ್ನು ಸಿದ್ದಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ, 1ಕ್ಕೆ ಅಕ್ಕಿಯನ್ನು ನೀಡಿ ಬಡವರು ಆರ್ಥಿಕವಾಗಿ ಸಶಕ್ತರಾಗಲು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು. ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮಿ, ಸಿದ್ದತೋಟೆಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ವೀರಣ್ಣಗೌಡ ಪರಸರೆಡ್ಡಿ, ಲಿಂಗಾರೆಡ್ಡಿ ಬಾಸರೆಡ್ಡಿ, ಸಾಬಣ್ಣಾ ಅಡ್ಡೇಶಿ ಇದ್ದರು.