ಜ್ಯೋತಿಷಿ ಮಾತು ಸವಾಲಾಗಿ ಸ್ವೀಕರಿಸಿ ಐಎಎಸ್ ಪಾಸಾದೆ
ಆಳಂದ: ಧರ್ಮಸ್ಥಳದಲ್ಲಿ ಜ್ಯೋತಿಷಿ ಬಳಿ ಐಎಎಸ್ ಅಧಿಕಾರಿಯಾಗಬೇಕೆಂಬ ಬಯಕೆ ಹೇಳಿಕೊಂಡಾಗ 'ನಿನ್ನಿಂದಾಗದು, ಬೇರೇನಾದರೂ ಮಾಡು' ಎಂಬ ಹೇಳಿಕೆಯನ್ನೇ ಸವಾಲಾಗಿ ಸ್ವೀಕರಿಸಿ ಪರೀಕ್ಷೆ ಬರೆದು ಪಾಸಾಗಿ ಜೋತಿಷ್ಯದ ಭವಿಷ್ಯವನ್ನೇ ಸುಳ್ಳಾಗಿ ಮಾಡಿದ್ದೇನೆಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ 1,041ನೇ ರ್ಯಾಂಕ್ ಪಡೆದ ರಾಜೇಶ ಪಾಂಡುರಂಗ ರಾಠೋಡ್ ಹೇಳಿದರು.
ಪಟ್ಟಣದ ಎಂಎಆರ್‌ಜಿ ಪಿಯು ಕಾಲೇಜು ಮತ್ತು ಎಸ್‌ಆರ್‌ಜಿ ಫೌಂಡೇಶನ್ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಯಾರೊಬ್ಬರ ಭವಿಷ್ಯ ಜ್ಯೋತಿಷಿಗಳ ಕೈಯಲ್ಲಿಲ್ಲ. ಅದನ್ನು ನಾವೇ ರೂಪಿಸಿಕೊಳ್ಳಬೇಕು. ಪ್ರತಿಭೆ ಮತ್ತು ಪರಿಶ್ರಮದಿಂದ ಗುರಿಮುಟ್ಟಲು ಸಾಧ್ಯ ಎಂದರು.
ಬಡತನ ಮುಂದೆ ಮಾಡಬೇಡಿ. ಛಲ ತೊಡಬೇಕು. ಮೂಢನಂಬಿಕೆ, ಕಂದಾಚಾರಕ್ಕೆ ಅಂಟಿಕೊಳ್ಳದೆ ಕಠಿಣ ಪರಿಶ್ರಮ, ನಿರಂತರ ಅಧ್ಯಯನ ಮಾಡಿದರೆ ಯಶಸ್ಸಿನ ಮೆಟ್ಟಿಲೇರಬಹುದು. ಹೈ-ಕ ಪ್ರದೇಶದಲ್ಲಿ ಶೇ.80ರಷ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊರತೆಯಿಂದ ಉನ್ನತ ಹುದ್ದೆ ಮರೀಚಿಕೆಯಾಗಿದೆ. ವಿದ್ಯಾರ್ಥಿಗಳು ಆರಂಭದಲ್ಲೇ ವ್ಯಕ್ತಿತ್ವ ವಿಕಸನ, ಅಂಕ ವೀರರಾಗಿ ಮುನ್ನೆಡೆ ಸಾಧಿಸಿ ಅಧ್ಯಯನದಲ್ಲಿ ಕ್ರಮಬದ್ಧತೆ ಹೊಂದಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಯುವ ಸಾಹಿತಿ ಡಿ.ಎನ್. ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿದರು. ನ್ನು ಪಾಟೀಲ, ಅಬ್ದುಲ್ ಸಲಾಂ ಸಗರಿ, ಮಲ್ಲಣ್ಣ ನಾಗೂರೆ, ಪ್ರೊ. ಎಸ್.ಎಚ್. ಗೋಧೆ, ಹರ್ಷಾನಂದ ಗುತ್ತೇದಾರ, ಡಾ. ಅಪ್ಪಾಸಾಬ ಬಿರಾದಾರ, ಕೆ.ಎಸ್. ಸಾವಳಗಿ, ಮಂಗಳಾ ಗುತ್ತೇದಾರ ಉಪಸ್ಥಿತರಿದ್ದರು. ತ್ರಿವೇಣಿ ಕಲಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿವಾನಂದ ಕಲ್ಮಂತಣಿ ಸ್ವಾಗತಿಸಿದರು. ಚನ್ನಬಸಪ್ಪ ಹೋತ್ಕಲ್ ವಂದಿಸಿದರು.