ಕಳಪೆ ಕೆಲಸಕ್ಕೆ ಸಾಥ್, ಕೃಷ್ಣ.. ಕೃಷ್ಣ..
ಶಹಾಪುರ: ಅನ್ಯಾಯ ಕಣ್ಮುಂದೆಯೇ ಕಾಣ್ತಿದೆ. ಇಡೀ ಕಾಮಗಾರಿ ಹಾಳಾಗಿ ಹೋಗಿದೆ. ಆದರೂ ಕಾಮಗಾರಿ ಗುಣಮಟ್ಟದ್ದಾಗಿದೆ, ತೃಪ್ತಿ ತಂದಿದೆ ಎಂದು ವರದಿ ನೀಡುವುದು ಆಘಾತಕಾರಿ ಸಂಗತಿ ಎಂದು ಶಾಸಕ ಗುರುಪಾಟೀಲ್ ಶಿರವಾಳ ಅಸಮಾಧಾನ ವ್ಯಕ್ತಪಡಿಸಿದರು.
ಮುಡಬೂಳ ವಿತರಣಾ ಕಾಲುವೆ ಪರಿಶೀಲಿಸಿದ ಅವರು, ನಿನ್ನಂಥ ಕ್ವಾಲಿಟಿಕಂಟ್ರೋಲ್ ಅಧಿಕಾರಿ ವರದಿಯಿಂದ ಸಾವಿರಾರು ರೈತರ ಬದುಕಿಗೆ ಧಕ್ಕೆಯುಂಟಾಗುತ್ತದೆ. ಸರ್ಕಾರಿ ಯೋಜನೆಯನ್ನು ಹಾಳು ಮಾಡುವಲ್ಲಿ ಗುತ್ತೇದಾರರೊಂದಿಗೆ ನಿಮ್ಮ ಪಾತ್ರವೂ ದೊಡ್ಡದಿದೆ ಎಂದು ಅಧಿಕಾರಿ ಸಂದೀಪ ಅವರನ್ನು ತರಾಟೆಗೆ ತಗೆದುಕೊಂಡರು.
ಆಕ್ರೋಶ: 0 ದಿಂದ 27 ಕಿಮೀವರೆಗೆ ಇಡೀ ಕಾಮಗಾರಿಯನ್ನು ಗುತ್ತೇದಾರರು ಮನಬಂದಂತೆ ನಿರ್ವಹಿಸಿದ್ದು ಅದನ್ನು ಕಂಡೂ ಕಾಣದಂತಿರುವ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರ ಜೀವನಾಡಿಯಾಗಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಕಾಲುವೆ ನವೀಕರಣದ ಕಾಮಗಾರಿಯ ಅವಕಾಶ ದೊರೆತಿದ್ದು ಈ ಭಾಗದ ರೈತರಿಗೆ ಅನುಕೂಲವಾಗಲಿದೆ.
ಕಾಲುವೆ ಕೊನೆ ಭಾಗದ ರೈತರಿಗೂ ನೀರು ದೊರಕುವ ವಿಶ್ವಾಸವಿದ್ದುದು ಒಂದಡೆಯಾದರೆ ಗುತ್ತೇದಾರರು ಇಡೀ ಎಂಬಿಸಿ ಕಾಲುವೆಯ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಇದನ್ನು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿರುವುದು ಅಸಂಬದ್ಧವಾಗಿದೆ. ಕಾಲುವೆ ನವೀಕರಣ ಸಂಬಂಧ ದಾಖಲೆಗಳ ಸಮೇತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸುವುದಾಗಿ ತಿಳಿಸಿದರು. ಈ ವೇಳೆ ವಸಂತ ಸುರಪುರ, ರೈತರಾದ ಮಲ್ಲಿಕಾರ್ಜುನ, ಗೌಡಪ್ಪಗೌಡ ರಬನಳ್ಳಿ, ರಾಮಚಂದ್ರ ಕಾಶಿರಾಜ, ವೆಂಕಟೇಶ ದೊರೆ ಇತರರು ಇದ್ದರು.