ಕಳಪೆ ಡೆಸ್ಕ್ ಪೂರೈಕೆ: ಖಂಡನೆ
ಯಾದಗಿರಿ: ಜಿಲ್ಲೆಯ 2011-12ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನದಡಿ 444 ಶಾಲೆಗಳಿಗೆ ಕಳಪೆ ಡೆಸ್ಕ್ ಪೂರೈಸಿ ಕೋಟ್ಯಂತರ ಲೂಟಿ ಸಾಬೀತಾಗಿದ್ದರು ತಪ್ಪಿತಸ್ಥ ಅಧಿಕಾರಗಳ ಮೇಲೆ ಶಿಸ್ತು ಕ್ರಮ ಏಕೆ ಕೈಗೊಂಡಿಲ್ಲ? ಎಂದು ಯುವ ಭಾರತ ಕ್ರಾಂತಿದಳ ಪದಾಧಿಕಾರಿಗಳು ಪ್ರತಿಭಟಿಸಿ ಪ್ರಶ್ನಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ನಂದಗೋಪಾಲ ಪಟವಾರಿ, ಸರ್ವ ಶಿಕ್ಷಣ ಅಭಿಯಾನದಡಿ 444 ಶಾಲೆಗಳಿಗೆ ಜೋಡಿ ಡೆಸ್ಕ್ ಪೂರೈಕೆ ಮಾಡಲು 4.34 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಡೆಸ್ಕ್‌ಗಳನ್ನು ಆಯಾ ಶಾಲೆಯ ಮುಖ್ಯಗುರುಗಳು ಮತ್ತು ಎಸ್‌ಡಿಎಂಸಿ ಅಧ್ಯಕ್ಷರು ಸೇರಿ ಕಳಪೆ ಮಟ್ಟದ ಡೆಸ್ಕ್ ಖರೀದಿಸಿ ಲಕ್ಷಾಂತರ ಕೊಳ್ಳೆಹೊಡೆದಿದ್ದಾರೆ ಎಂಬುದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವರದಿ ದೃಡಪಡಿಸಿದೆ.
ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧ್ಯಕ್ಷರು ಹಾಗೂ ಮುಖ್ಯಗುರುಗಳ ಮೇಲೆ ಡಿಡಿಪಿಐ ಮತ್ತು ಬಿಇಓಗಳು ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿ ಹಾಕಲು ಮುಂದಾಗಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಕೂಡಲೇ ಆಯಾ ಶಾಲೆಯ ಮುಖ್ಯ ಗುರುಗಳು ಮತ್ತು ಎಸ್‌ಡಿಎಂಸಿ ಅಧ್ಯಕ್ಷರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ಪ್ರಕರಣದ ತನಿಖೆ ನಡೆಸಲು ವಿಳಂಬ ಮಾಡುತ್ತಿದ್ದ, ಡಿ.ಡಿ.ಪಿ.ಐ ಮತ್ತು ಬಿ.ಇ.ಓಗಳ ಮೇಲೆ ಕ್ರಮ ಜರುಗಿಸಿ, ತನಿಖೆಗೆ ಒಳಪಡಿಸಿ ಎಂದರು.
ವಿಳಂಬವಾದಲ್ಲಿ ಸತ್ಯಾಗ್ರಹ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಉಪಾಧ್ಯಕ್ಷ ರಾಜು ದೊರೆ, ಲಕ್ಷ್ಮಣ ಕನೇಕಲ್, ರಾಜು ನಕ್ಕಲ್, ಬುಡಾಯಿನೊರ್ ಇದ್ದರು.