'ಸದಾ' ನಿರ್ಲಕ್ಷ್ಯ ಖಂಡಿಸಿ ಅಹೋರಾತ್ರಿ ಪ್ರತಿಭಟನೆ
ಯಾದಗಿರಿ: ಹೈದ್ರಾಬಾದ್ ಕರ್ನಾಟಕಕ್ಕೆ ಹಾಗೂ ಗುಲ್ಬರ್ಗ ರೈಲ್ವೆ ವಿಭಾಗೀಯ ಕೇಂದ್ರಕ್ಕೆ ಮತ್ತು ಯಾದಗಿರಿಗೆ ಯಾವ ಕೋಡುಗೆಯನ್ನೂ ನೀಡದ ರೇಲ್ವೆ ಸಚಿವರ ಕಡೆಗಣನೆ ಖಂಡಿಸಿ ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಮಂಗಳವಾರ ಅಹೋರಾತ್ರಿ ರೈಲ್ವೆ ನಿಲ್ದಾಣದ ಎದರು ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಶರಣು ಗದ್ದುಗೆ, ಕೆಲವು ರೈಲುಗಳು ಸರಿಯಾಗಿ ಬರುತ್ತಿಲ್ಲ, ಮತ್ತು ಈ ನಿಲ್ದಾಣದಲ್ಲಿ ನಿಲುತ್ತಿಲ್ಲ. ವಾಡಿ- ಗದಗ ಮತ್ತು ಆಲಮಟ್ಟಿ- ಯಾದಗಿರಿ ಮಾರ್ಗಗಳ ಬಗ್ಗೆ ಘೋಷಣೆ ಮಾಡಿದಿರುವುದು ಯಾದಗಿರಿ ಜಿಲ್ಲೆಯ ಕರ್ನಾಟಕದಲ್ಲಿ ಇದೇಯೋ ಇಲ್ಲವೋ ಎಂಬಂತಾಗಿದೆ.
ಗುಲ್ಬರ್ಗ- ಬೆಂಗಳೂರು ಫಾಸ್ಟ್ ಪ್ಯಾಸೆಂಜರ್, ಯಾದಗಿರಿ- ಹೈದರಾಬಾದ್ ಅನೇಕ ರೈಲು ಸೌಲಭ್ಯಗಳನ್ನು ನೀಡಿದಿರುವುದು ಜಿಲ್ಲೆಯನ್ನು ಕಡೆಗಣಿಸಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೂಡಲೇ ಪೂರಕ ಬಜೆಟ್ ಮಂಡಿಸಿ ನ್ಯಾಯ ನೀಡಬೇಕು. ಗುಲ್ಬರ್ಗದಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಹೈ.ಕ. ಭಾಗಕ್ಕೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಯಾದಗಿರಿ ರೈಲ್ವೆ ನಿಲ್ದಾಣದ ಮಾಸ್ಟರ್ ಮೂಲಕ ರೈಲ್ವೆ ಖಾತೆ ಸಚಿವ ಸದಾನಂದಗೌಡರಿಗೆ ಮನವಿ ಸಲ್ಲಿಸಿದರು. ಈ ವೇಳೆ ಶರಣು ಇಟಗಿ, ದೇವಾ ಪಾಟೀಲ, ಗೌಡಪ್ಪ ಕೋರಿ, ರವಿ ತಳಬಡಿ, ಬಾಪುಗೌಡ, ಕೌಶಿಕ, ಸಿದ್ದು ಪದ್ಮಾಕರ್, ಮಹೇಶ, ನಂದು ಮತ್ತಿತರು ಇದ್ದರು.