ಮಾಡಿದ ಕೆಲಸಕ್ಕೆ ಕೂಲಿ ಕೊಡ್ರೀ...
ಸುರಪುರ: ತಾಲೂಕಿನ ಪೇಠ ಅಮ್ಮಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಜಾಲಿಬೆಂಚಿ, ಮಂಗಳೂರು ಗ್ರಾಮಗಳ ಕಾರ್ಮಿಕರಿಗೆ ಕೂಲಿ ಹಣವನ್ನು ತಕ್ಷಣ ಪಾವತಿಸಬೇಕು ಎಂದು ಕೂಲಿ ಕಾರ್ಮಿಕರು ಆಗ್ರಹಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಗ್ರಾಮಸ್ಥರು ಕೂಲಿ ಕೆಲಸ ಮಾಡಿದ್ದಾರೆ. ಆದರೆ ಕಳೆದ 9 ತಿಂಗಳಿಂದ ಹಣ ಪಾವತಿಸಿಲ್ಲ. ಹೀಗಾಗಿ ಬುದಕುವುದು ಕಷ್ಟಕರವಾಗಿದೆ ಎಂದು ತಾಪಂ ಇಒಗೆ ದೂರಿದರು.
ದಿನ ನಿತ್ಯದ ವಸ್ತುಗಳ ಬೆಲೆ ಗಗನಕ್ಕೇರಿದೆ. ಸಾಲ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಕಷ್ಟಪಟ್ಟು ದುಡಿದರೂ ಹಣ ಪಾವತಿಸುತ್ತಿಲ್ಲ. ಹೀಗಾದರೆ ನಮ್ಮ ಬದುಕು ಬೀದಿ ಪಾಲಾಗುತ್ತದೆ ಎಂದು ನೋವು ತೋಡಿಕೊಂಡರು.
ಸಾಮಾಜಿಕ ಲೆಕ್ಕ ಪರಿಶೋಧನೆ ವರದಿಯನ್ನು ರದ್ದುಗೊಳಿಸಬೇಕು. ಶೀಘ್ರ ನೆರೇಗಾ ಯೋಜನೆಗೆ ಹಣ ಬಿಡುಗಡೆ ಮಾಡಬೇಕು ಎಂದು ಕೂಲಿಕಾರ್ಮಿಕರು ಒತ್ತಾಯಿಸಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಮಾರು 70 ಕೂಲಿ ಕಾರ್ಮಿಕರು ಮನವಿ ಪತ್ರವನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಯ್ಯ ಹಿರೇಮಠಗೆ ಸಲ್ಲಿಸಿದರು.