ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

350 ವಿದ್ಯಾರ್ಥಿಗಳು ಶಾಲೆಗೊಬ್ರೇ ಮೇಸ್ಟ್ರು!

Mainashree
Updated On : 14 Jul 2014, 10:00 am

ಮಂಜುನಾಥ ಸ್ವಾಮಿ
ಯಾದಗಿರಿ:  ತಾಲೂಕಿನ ಕಿಲ್ಲನಕೇರಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಶಿಕ್ಷಕರ ಕೊರತೆ ಇದೆ. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯದೆ ಪಾಲಕರು ಕಂಗಾಲಾಗಿದ್ದಾರೆ. ಬೇರೆ ಶಾಲೆಯತ್ತ ಮಕ್ಕಳನ್ನು ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗುತ್ತಿದ್ದಾರೆ.
ಒಂದರಿಂದ ಎಂಟನೇಯ ತರಗತಿಯವರೆಗೆ ಇರುವ ಶಾಲೆಯಲ್ಲಿ ಒಟ್ಟು 350 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳ ಸಂಖ್ಯೆಗನುಗುಣವಾಗಿ 9 ಶಿಕ್ಷಕ ಹುದ್ದೆ ಮಂಜೂರು ಮಾಡಲಾಗಿದೆ. ಒಂದು ಟಿಜಿಟಿ, ಒಂದು ವಿಜ್ಞಾನ ಹಾಗೂ ಸಾಮಾನ್ಯ 5 ಸೇರಿ ಒಟ್ಟು 7 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ.
ಇರುವ ಇಬ್ಬರು ಶಿಕ್ಷಕರಲ್ಲಿ ಮುಖ್ಯಗುರುಗಳು ಬಟ್ಟೆ, ಪುಸ್ತಕ ವಿತರಣೆ, ವರ್ಗಾವಣೆ ಪತ್ರ(ಟಿ.ಸಿ) ಕೊಡುವುದು, ಮಕ್ಕಳ ದಾಖಲಾತಿ ಮಾಡಿಕೊಂಡರೆ, ಇನ್ನುಳಿದ ಒಬ್ಬರೇ ಶಿಕ್ಷಕರು ಇಡೀ 8 ತರಗತಿಯ 350 ಮಕ್ಕಳನ್ನು ನಿಭಾಯಿಸಬೇಕು. ಇದು ಶಾಲೆಯ ವಾಸ್ತವ. ಒಬ್ಬ ಶಿಕ್ಷಕ ದಿನದಲ್ಲಿ ಯಾವ ತರಗತಿಗಂತ ಸರಿಯಾಗಿ ಪಾಠ ಮಾಡಲು ಸಾಧ್ಯ?
ಶಿಕ್ಷಕರ ಕೊರತೆ ಎಂಬುದೇ ದೊಡ್ಡ ದುಸ್ಥಿತಿ. ಜೊತೆಗೆ ಮೂಲಭೂತ ಸೌಕರ್ಯಗಳ ಕೊರತೆಯೂ ಪೈಪೋಟಿ ನೀಡುತ್ತಿದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಪಾಲಕರು ಸೇರಿಸುತ್ತಿಲ್ಲ ಎಂದು ದೂರುವವರಿಗೆ ನಿಯತ್ತಾಗಿ ಸೌಲಭ್ಯ ಪೂರೈಸದಿದ್ದರೆ ಮತ್ತೇನು ಮಾಡಲು ಸಾಧ್ಯ? ಖಾಸಗಿ ಶಾಲೆಗಳಿಗೆ ಸೇರಿಸಲು ದುಡ್ಡು ಎಲ್ಲಿಂದ ತರುವುದು? ಇರುವ ಶಾಲೆಯಲ್ಲಿ ನೆಟ್ಟಗೆ ವಿದ್ಯೆ ಕಲಿಸದಿದ್ದರೆ ಮಕ್ಕಳನ್ನು ಶಾಲೆಗೆ ಯಾಕೆ ಕಳಿಸಬೇಕು? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಶಿಕ್ಷಕರನ್ನು ನಿಯುಕ್ತಿಗೊಳಿಸಲು ಸೂಕ್ತ ಶಿಕ್ಷಕರೇ ಲಭ್ಯವಾಗುತ್ತಿಲ್ಲವೇ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಸರ್ಕಾರಿ ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗಾಗಿ ಸಕಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಆದರೆ ಮಕ್ಕಳಿಗೆ ತಲುಪಿಸಲು ಸಿಬ್ಬಂದಿಗಳೇ ಇಲ್ಲದಿರುವುದರಿಂದ ನಿರೀಕ್ಷಿತ ಪೂರೈಕೆ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಿಸಿತ್ತು. ಆದರೆ ಶೈಕ್ಷಣಿಕ ವರ್ಷ ಅಂತ್ಯವಾಗುತ್ತಿದ್ದಂತೆ ಅವರನ್ನೂ ಕೈಬಿಡಲಾಗಿದೆ. ಇದೀಗ ಶಿಕ್ಷಕರ ನೇಮಕಾತಿಗಾಗಿ ಅರ್ಹತಾ ಪರೀಕ್ಷೆ ಇಡಲಾಗಿದೆ. ನೇಮಕಾತಿ ಕಾರ್ಯ ಪೂರ್ತಿಯಾಗುವುದು ಹೇಗೂ ತಡವಾಗುತ್ತದೆ. ಒಟ್ಟಿನಲ್ಲಿ ಈ ಬಾರಿಯೂ ಮಕ್ಕಳು ವ್ಯಾಸಂಗದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆಯಿದೆ. ಪರಿಹಾರವೆಂಬಂತೆ ಈ ಹಿಂದೆ ಅತಿಥಿ ಶಿಕ್ಷರನ್ನಾಗಿ ನಿಯೋಜಿಸಿದ ಶಿಕ್ಷರನ್ನೇ ಮತ್ತೆ ಮುಂದುವರೆಸುವುದಾಗಿದೆ.
 ನಂದಗೋಪಾಲ ಪಟವಾರಿ, ಜಿಲ್ಲಾಧ್ಯಕ್ಷ
30ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕನಿರಬೇಕು ಎಂಬ ಆದೇಶವಿದೆ. ಆದರೆ ಈ ಶಾಲೆಯಲ್ಲಿ ಸಾಧ್ಯವಾಗಿಲ್ಲ. 350 ವಿದ್ಯಾರ್ಥಿಗಳಿಗೆ ಇಬ್ಬರೇ ಶಿಕ್ಷಕರು. ನಾನು ಕಚೇರಿ ಕೆಲಸಗಳಲ್ಲಿ ತೊಡಗಿದರೆ ಇರುವ ಮತ್ತೊರ್ವ ಶಿಕ್ಷಕರೇ ಪೂರ್ತಿ ತರಗತಿಗಳನ್ನು ನಿಭಾಯಿಸಬೇಕು. ಇದು ಅತ್ಯಂತ ಕಠಿಣವಾಗಿದ್ದು ಮಕ್ಕಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶೀಘ್ರವಾಗಿ ಅಗತ್ಯ ಶಿಕ್ಷಕರನ್ನು ನೇಮಿಸಬೇಕಿದೆ.
 ನರೇಂದ್ರ ಜೋಶಿ, ಮುಖ್ಯಗುರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement