ಕೈಗಾರಿಕೆಗೆ ಕೊಟ್ಟ ಸೌಲಭ್ಯ ಕೃಷಿಗೂ ನೀಡಿ
ಆಳಂದ: ಕೈಗಾರಿಕೆಗಳಿಗೆ ಕೊಟ್ಟ ಸೌಲಭ್ಯ ಮತ್ತು ರಿಯಾಯ್ತಿಯನ್ನು ಕೃಷಿ ಕ್ಷೇತ್ರಕ್ಕೂ ನೀಡಬೇಕು ಎಂದು ಮಾಜಿ ಸಚಿವ ಎಸ್.ಕೆ. ಕಾಂತಾ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ಶರಣ ಏಕಾಂತ ರಾಮಯ್ಯನ ಮಂದಿರದಲ್ಲಿ ತಾಲೂಕು ಕಬ್ಬು ಬೆಳೆಗಾರರು ಹಾಗೂ ರೈತರು ಸೇರಿ ತಮ್ಮ ಬೆಳೆ ಹಾನಿ ಪರಿಹಾರಕ್ಕೆ ಹಾಗೂ ಕಬ್ಬಿನ ಬಿಲ್ ಪಾವತಿಗೆ ಶ್ರಮಿಸಿದ ಶಾಸಕ ಬಿ.ಆರ್. ಪಾಟೀಲ್ ಮತ್ತು ತಮಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ರೈತರನ್ನು ಮತ್ತು ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ದಿವಾಳಿ ಮಾಡಲು ಹೊರಟ ಬಂಡವಾಳಶಾಹಿ ಸರ್ಕಾರಗಳ ವಿರುದ್ಧ ಇಂದು ಒಗ್ಗಟ್ಟಾಗಿ ಕೃಷಿ ಉಳಿಸಿ ಬೆಳೆಸಲು ರೈತರು ಮುಂದಾಗಬೇಕು ಎಂದು ಕರೆ ನೀಡಿದರು.
ಶಾಸಕ ಬಿ.ಆರ್. ಪಾಟೀಲ್ ಮಾತನಾಡಿದರು. ಮೈಂದರ್ಗಿ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಲ್ಲೇಶಪ್ಪ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಉಮಾಕಾಂತ ನಿಗ್ಗಡಗಿ, ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ವಿಶ್ವನಾಥ ಸರಸಂಬಿ, ವಿಠ್ಠಲ ಶಿಂಧೆ, ಭೀಮಾಶಂಕರ ಹಳಿಮನಿ ಮಾತನಾಡಿದರು. ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಆನಂತರಾಜ ಸಾವು, ಜಿಪಂ ಸದಸ್ಯೆ ಮಂಗಲಾ ಅರವಿಂದ ನೋರಣಿ, ಶಿವುಪುತ್ರಪ್ಪ ಪಾಟೀಲ ಮುನ್ನೊಳ್ಳಿ, ಶರಣು ಪಾಟೀಲ್ ಪಾಲ್ಗೊಂಡಿದ್ದರು.
ರೈತರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿಕೊಳ್ಳಬೇಕಾಗಿದ್ದ ಮಾಜಿ ಸಚಿವ ಎಸ್.ಕೆ. ಕಾಂತಾ ಮತ್ತು ಶಾಸಕ ಬಿ.ಆರ್. ಪಾಟೀಲ್ ಅವರು ಜಂಟಿಯಾಗಿ, ರೈತರು ಸಂಕಷ್ಟದಲ್ಲಿದ್ದಾರೆ, ಸನ್ಮಾನ ಬೇಡ ಎಂದು ಹೇಳುವ ಮೂಲಕ ಕೃಷಿ ಮತ್ತು ಕೃಷಿಕರ ಕುರಿತು ಚಿಂತನ- ಮಂಥನ ಸಭೆಯಾಗಿ ಮಾರ್ಪಡಿಸುವ ಮೂಲಕ ಗಮನ ಸೆಳೆದರು.