ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಳ
ಗುಲ್ಬರ್ಗ: ರಾಜ್ಯ ಸರ್ಕಾರದಿಂದ ಹಲವು ಸೌಲಭ್ಯ ಕಲ್ಪಿಸಿ, ಪ್ರತಿಷ್ಠಾನಗಳು ವಿವಿಧ ಜಾಗೃತಿ ಶಿಬಿರಗಳನ್ನು ಹಮ್ಮಿಕೊಂಡರೂ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್ ಕಳವಳ ವ್ಯಕ್ತಪಡಿಸಿದರು.
ನಗರದ ಆಳಂದ ರಸ್ತೆಯಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಜ್ಞಾನ ಗಾಯಿತ್ರಿ ಸೇವಾ ಪ್ರತಿಷ್ಠಾನ, ಗುಲ್ಬರ್ಗ ಹಾಗೂ ಭಾರತೀಯ ವಿದ್ಯಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಹಿಳಾ ನಿಲಯದ ನಿವಾಸಿಗಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಾ. ಶಾಂತವೀರ ಸುಂಕದ ಮಾತನಾಡಿದರು. ಜ್ಞಾನ ಗಾಯಿತ್ರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ನರ್ಮದಾ ರೆಡ್ಡಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
200 ಜನರ ತಪಾಸಣೆ: ಶಿಬಿರದಲ್ಲಿ 18ಕ್ಕಿಂತ ಕಡಿಮೆ ವಯಸ್ಸಿನ 80 ಮಹಿಳಾ ನಿವಾಸಿಗಳಿಗೆ ರಕ್ತ ತಪಾಸಣೆ ಮಾಡಿ ರಕ್ತದ ಗುಂಪು ಹಾಗೂ ಹಿಮೊಗ್ಲೋಬಿನ್ ಮಟ್ಟವನ್ನು ತಿಳಿಸಿ ಕೊಡಲಾಯಿತು. ಅದರಲ್ಲಿ 50 ಬಾಲಕಿಯರು ರಕ್ತ ಹೀನತೆಯಿಂದ ಬಳಲುತ್ತಿರುವುದು ಕಂಡುಬಂದಿತು. ಅವರಿಗೆ ಔಷಧೋಪಚಾರವನ್ನು ಉಚಿತವಾಗಿ ಮಾಡಲಾಯಿತು. 20 ಬುದ್ಧಿಮಾಂದ್ಯ ಬಾಲಕಿಯರನ್ನು ಪರೀಕ್ಷಿಸಲಾಯಿತು. ಒಟ್ಟು 200 ಬಾಲಕಿ/ಮಹಿಳೆಯರನ್ನು ಪರೀಕ್ಷಿಸಿ ಆರೋಗ್ಯ ಸಲಹೆ ಹಾಗೂ ಉಚಿತ ಔಷಧ ವಿತರಿಸಲಾಯಿತು. ಉದ್ದಿಮೆದಾರ ರಾಜಶ್ರೀ ಗಿಲ್ಡಾ ಶಿಬಿರದ ಅಧ್ಯಕ್ಷತೆ ವಹಿಸಿದ್ದರು.