ಮಾನಂಭಗಕ್ಕೂ ಯತ್ನಿಸಿದ್ದ ನೊಂದ ಮಹಿಳೆ ದೂರು
ಗುಲ್ಬರ್ಗ: ಹಣಕ್ಕಾಗಿ ಪೀಡಿಸಿದ ಆಟೋ ಚಾಲಕ ತೀವ್ರ ಹಲ್ಲೆ ನಡೆಸಿದ್ದಾನೆ, ಜೊತೆಗೇ ಮಾನಭಗಂಕ್ಕೂ ಯತ್ನಿಸಿದ್ದಾನೆಂದು ಶಿರಸನಬುಗಡಿ ತಾಂಡಾದ ನಿವಾಸಿ ಜಗದೇವಿ ಕೇಶು ಚವ್ಹಾಣ್ ತನ್ನ ಮೇಲಾಗಿರುವ ಹಲ್ಲೆ ಪ್ರಸಂಗದ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಮುಂಬೈನಿಂದ ರೈಲಿನಲ್ಲಿ ನಸುಕಿನ 3.30ಕ್ಕೆ ಗುಲ್ಬರ್ಗಕ್ಕೆ ಬಂದಿದ್ದೆ. 6 ಗಂಟೆವರೆಗೂ ನಿಲ್ದಾಣದಲ್ಲೇ ತಂಗಿದ್ದೆ. ನಂತರ ಹೊರಗೆ ಬಂದು ಗಂಜ್ ಪ್ರದೇಶಕ್ಕೆಂದು ಹೋಗಲು ಆಟೋ ಹತ್ತಿದೆ. ಅದೇ ಆಟೋ ಚಾಲಕ ಕುಸನೂರ ಕಡೆ ಕರೆದೊಯ್ದು ಹಣಕ್ಕಾಗಿ ಪೀಡಿಸಿ, ಮಾನಭಂಗಕ್ಕೂ ಯತ್ನಿಸಿದ್ದಾನೆ. ತೀವ್ರ ಸ್ವರೂಪದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆಂದು ದೂರಿನಲ್ಲಿ ತಿಳಿಸಿದ್ದಾರೆ.
ನಡೆದಿದ್ದಿಷ್ಟು: ಆಟೋದಲ್ಲಿ ಕೂಡಿಸಿಕೊಂಡು ಗುಲ್ಬರ್ಗದ ಆಕಡೆ ಈಕಡೆ ಸುತ್ತಾಡಿ ಹೊರವಲಯದ ಯಾರೂ ಇಲ್ಲದ ಜಾಗಕ್ಕೆ ಕರೆದುಕೊಂಡು ಹೋಗುತ್ತಿದ್ದ. ನಾನು ಈ ಕಡೆ ಯಾಕೆ ಕರೆದುಕೊಂಡು ಬಂದಿರುವಿ ಅಂತಾ ಅಂದಿದ್ದಕ್ಕೆ ಆಟೋ ನಿಲ್ಲಿಸಿ ನನಗೆ ಹೊರಗೆ ಕರೆದಾಗ ನಾನು ಆಟೋದಿಂದ ಇಳಿದೆ. ಆಗ ಅವನು ನಿನ್ನ ಹತ್ತಿರವಿರುವ ಹಣ ಬಂಗಾರ ಕೊಡು ಎಂದ. ಆಗ ನಾನು ಕೂಲಿ ನಾಲಿ ಮಾಡುವಳಿದ್ದು ನನ್ನ ಹತ್ತಿರ ಹಣ ಬಂಗಾರ ಇಲ್ಲ ಎಂದಿದ್ದಕ್ಕೆ ನನ್ನ ಕೈಹಿಡಿದು ಆಟೋ ನಿಲ್ಲಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕರೆದೊಯ್ದು ಪುನಃ ನನಗೆ ಬಂಗಾರ, ಹಣ ಕೊಡುವಂತೆ ಹೆದರಿಸಿದ.
ಆಗ ನಾನು, ನನ್ನ ಹತ್ತಿರ ಇಲ್ಲವೆಂದರೂ ನೀನು ಸುಳ್ಳು ಹೇಳುತ್ತಿ ಅಂತಾ ಅಂದವನೇ ಆಟೋದಲ್ಲಿದ್ದ ರಾಡ್ ತೆಗೆದುಕೊಂಡು ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ತಲೆಯ ಹಿಂಬದಿಗೆ ಹಾಗೂ ಎಡಗಣ್ಣಿನ ಕೆಳಗೆ, ಬಲಗಣ್ಣಿನ ಹುಬ್ಬಿಗೆ, ಎಡಗಲ್ಲಕ್ಕೆ ಬಿರುಸಿನಿಂದ ಹೊಡೆದು ತೀವ್ರ ರಕ್ತಗಾಯ ಮಾಡಿದ. ಆಗ ನಾನು ನೆಲಕ್ಕೆ ಕುಸಿದು ಬಿದ್ದೆ. ಬಳಿಕ ಅವನು ಆಟೋದೊಂದಿಗೆ ಹೋಗಿದ್ದಾನೆ. ಸದರಿ ಆಟೋ ಚಾಲಕ ಕಪ್ಪು ಬಣ್ಣ, ಎತ್ತರವಾಗಿದ್ದು ನೋಡಿದರೆ ಗುರ್ತಿಸುತ್ತೇನೆಂದು ಜಗದೇವಿ ದೂರಿನಲ್ಲಿ ಹೇಳಿದ್ದಾರೆ.