ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೈತರಿಗೆ ಅರಣ್ಯ ಇಲಾಖೆ ಕಿರುಕುಳ: ಆರೋಪ

Rashmi Kasaragodu
Updated On : 17 Jul 2014, 11:05 am

ಚಿಂಚೋಳಿ: ತಾಲೂಕಿನ ಕೃಷಿ ಕೂಲಿಕಾರರ ಮತ್ತು ರೈತರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿ ತಹಸೀಲ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ತಾಲೂಕಿನಲ್ಲಿ ಮಳೆಯ ಅಭಾವದಿಂದ ರೈತರು ಬಿತ್ತನೆ ಮಾಡಿದ ಮುಂಗಾರು ಬೆಳೆಗಳು ನಾಶಗೊಂಡಿವೆ. ತಾಲೂಕಿನಲ್ಲಿ ಚೆಟ್ಟಿನಾಡ್ ಮತ್ತು ಸಾಗರ ಸಿಮೆಂಟ್ ಕಂಪನಿಗಳು ಪ್ರಾರಂಭಿಸಿ 5-6 ವರ್ಷಗಳಾದರೂ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ.
ಕಂಪನಿಗೆ ಕಡಿಮೆ ದರದಲ್ಲಿ ಜಮೀನು ನೀಡಿದ ರೈತರಿಗೆ ಅನ್ಯಾಯವಾಗಿದೆ. ತಾಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚು ಬಡ ಕೂಲಿಕಾರರು ಕಳೆದ 50-60 ವರ್ಷಗಳಿಂದ ಸರ್ಕಾರಿ ಜಮೀನು ಸಾಗುವಳಿ ಮಾಡಿ ತಮ್ಮ ಉಪಜೀವನ ಸಾಗಿಸುತ್ತಿದ್ದಾರೆ. ಆದರೆ ಸರ್ಕಾರ  ರೈತರಿಗೆ ಪಟ್ಟಾ ನೀಡಿಲ್ಲವಾದ್ದರಿಂದ ಅರಣ್ಯ ಇಲಾಖೆಯವರು ಬಡ ರೈತರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಶಾದೀಪುರ ಗ್ರಾಮದ ಸರ್ಕಾರಿ ಹೆಚ್ಚುವರಿ ಜಮೀನಿನಲ್ಲಿ 59 ರೈತರಿಗೆ ಜಮೀನು ಸರ್ಕಾರದಿಂದ ಮಂಜೂರುಗೊಳಿಸಿ ರೈತರ ಹೆಸರು ಪಹಾಣಿಯಲ್ಲಿದೆ. ಆದರೂ ಇದುವರೆಗೆ ಕಬ್ಜೆ ನೀಡಿಲ್ಲ. 12 ತಿಂಗಳಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ ಇದರಿಂದ ಕೂಲಿಕಾರರು ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ತುಳಜಪ್ಪಾ ರುಸ್ತಂಪುರ, ಮೋಹನ ಕಟ್ಟಿಮನಿ, ಅಶೋಕ ಕಲಶೆಟ್ಟಿ, ಮಲ್ಲಮ್ಮ ಕೋಡ್ಲಿ, ಕುಪೇಂದ್ರ ತಳವಾರ, ದೇವೀಂದ್ರಪ್ಪಾ ಸಜ್ಜನ್, ಓಮನರಾವ್ ಗಾಯಕವಾಡ, ಚಂದ್ರಮ್ಮ ಪೋಚಾವರಂ, ಭೀಮರಾವ್ ಹಲಗಿ ಇದ್ದರು.
ಕೃಷಿ ಕೂಲಿಕಾರರು ತಹಸೀಲ್ದಾರ್ ಕಚೇರಿ ಎದುರು 4 ತಾಸು ಪ್ರತಿಭಟನೆ ನಡೆಸಿದರೂ ಯಾರು ಮನವಿ ಸ್ವೀಕರಿಸಲು ಆಗಮಿಸಲಿಲ್ಲ. ಆದ್ದರಿಂದ ಪ್ರತಿಭಟನೆ ಮುಂದುವರೆಸಲಾಗಿದೆ ಎಂದು ಕುಪೇಂದ್ರ ತಳವಾರ ತಿಳಿಸಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement