ಕಸಾಪ ಭವನ ನಿರ್ಮಾಣಕ್ಕೆ ಗ್ರಹಣ ಮೋಕ್ಷ
ಮಂಜುನಾಥ ಸ್ವಾಮಿ
ಕ.ಪ್ರ. ವಾರ್ತೆ ಯಾದಗಿರಿ ಜು. 17
ಯಾದಗಿರಿ ಜಿಲ್ಲೆಯಾದ ನಂತರ ಸಾಹಿತಿಗಳು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಭವನ ನಿರ್ಮಾಣದ ಕನಸು ಈಗ ಈಡೇರುತ್ತಿದೆ. ಹಲವಾರು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕಟ್ಟಡ ಕಾಮಗಾರಿಗೆ ಚಾಲನೆ ಸಿಕ್ಕಿದ್ದು, ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯಾಗಿ ನಾಲ್ಕು ವರ್ಷ ಗತಿಸಿದ್ದರೂ, ಕನ್ನಡ ಸಾಹಿತ್ಯ ಪರಿಷತ್ ಯಾವುದೇ ಕಾರ್ಯಕ್ರಮಗಳು ಮಾಡಬೇಕಾದರೆ ಖಾಸಗಿ ಕಲ್ಯಾಣ ಮಂಟಪ ಹಾಗೂ ಇನ್ನಿತರ ಪ್ರಾಂಗಣಗಳು ನಡೆಸಬೇಕಾದ ಅನಿವಾರ್ಯತೆ ಇತ್ತು. ಕನ್ನಡಕ್ಕಾಗಿಯೇ ಒಂದು ಕಟ್ಟಡ ಇಲ್ಲ ಎನ್ನುವ ಕೊರಗು ಸಾಹಿತ್ಯ ಅಭಿಮಾನಿಗಳಿಗೆ ಇತ್ತು. ಕನ್ನಡ ಭವನವಾಗಲಿ ಅಥವಾ ಪರಿಷತ್ ಭವನವಾಗಲಿ, ರಂಗಮಂದಿರವಾಗಲ್ಲಿ ಇರಲಿಲ್ಲ. ಅನೇಕ ಹೋರಾಟ ಹಾಗೂ ಮನವಿಗಳಿಂದ ಕಸಾಪ ತಾ. ಘಟಕಕ್ಕೆ ಭವನ ನಿರ್ಮಿಸಲು ಮಂಜೂರಾಗಿದ್ದರೂ ಕಾಮಗಾರಿ ನನೆಗುದಿಗೆ ಬಿದ್ದಿತ್ತು.
ಜಿಲ್ಲೆಯಾದ ನಂತರ ರಾಜ್ಯ ಸರ್ಕಾರದಿಂದ ಕನ್ನಡ ಭವನ, ರಂಗಮಂದಿರ, ಗುರುಭವನ, ಉರ್ದು ಭವನ ಸೇರಿದಂತೆ ನಾಲ್ಕು ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ಆದರೆ ನಗರದ ಗ್ರಾಮೀಣ ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಸುಮಾರು ಎರಡು ಎಕರೆ ಜಮೀನಿಗೆ ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿರುವುದರಿಂದ ಕಟ್ಟಡ ಕಾಮಗಾರಿಗಳು ಪ್ರಾರಂಭವಾಗಿಲ್ಲ.
ಈ ಮಧ್ಯೆ ಕಸಾಪ ತಾ. ಘಟಕಕ್ಕೆ ಮಂಜೂರಾದ ನಿವೇಶನದಲ್ಲೂ ಕಟ್ಟಡ ನಿರ್ಮಾಣ ನನೆಗುದಿಗೆ ಬಿದ್ದಿತ್ತು. 1996 ರಲ್ಲಿಯೇ ಅಂದಿನ ಪುರಸಭೆ ಆಡಳಿತವು, ಕಸಾಪ ತಾ. ಘಟಕಕ್ಕೆ ತಾಪಂ ಎದುರಿನ ಸುಮಾರು 4,800 ಚದರ ಅಡಿ ನಿವೇಶನ ಮಂಜೂರು ಮಾಡಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ 15 ಲಕ್ಷ ಅನುದಾನ ಮಂಜೂರಾಗಿತ್ತು. ಆದರೆ ತಾಂತ್ರಿಕ ತೊಂದರೆಗಳಿಂದಾಗಿ ಈ ಅನುದಾನವನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಇದೀಗ ಎಲ್ಲ ಅಡಚಣೆಗಳು ನಿವಾರಣೆಯಾಗಿದ್ದು, ಜಿಲ್ಲಾಡಳಿತದ ಬಳಿ ಇದ್ದ 15 ಲಕ್ಷ ಅನುದಾನದಲ್ಲಿ, ಸದ್ಯಕ್ಕೆ 12.50 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಇದೇ ಅನುದಾನವನ್ನು ಕಾಮಗಾರಿಗೆ ಬಳಸಿಕೊಳ್ಳಲಾಗಿದೆ.
ಕಾಮಗಾರಿಗೆ ಒಟ್ಟು 49.53 ಲಕ್ಷ ಅಂದಾಜು ವೆಚ್ಚ ನಿರೀಕ್ಷಿಸಲಾಗಿದೆ. ಇದರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 15 ಲಕ್ಷ ಬಿಡುಗಡೆಯಾಗಿದೆ. 10 ಲಕ್ಷ ಅನುದಾನ ನೀಡುವುದಾಗಿ ಸ್ಥಳೀಯ ಶಾಸಕ ಡಾ. ಎ.ಬಿ. ಮಾಲಕರಡ್ಡಿ ಇತ್ತೀಚೆಗೆ ನಡೆದ ತಾ. ಸಾಹಿತ್ಯ ಸಮ್ಮೇಳನದಲ್ಲಿ ಭರವಸೆ ನೀಡಿದ್ದಾರೆ.
ಮತ್ತೆ 15 ಲಕ್ಷ ನೀಡುವಂತೆ ಕಸಾಪ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪತ್ರ ಬರೆಯಲಾಗಿದೆ. ಒಟ್ಟಾರೆ 40 ಲಕ್ಷ ಅನುದಾನವನ್ನು ಹೊಂದಿಸುವ ಕಾರ್ಯ ಮಾಡಲಾಗಿದ್ದು, ಇನ್ನುಳಿದ ಅನುದಾನವನ್ನು ಪಡೆಯುವ ಮೂಲಕ ಕನ್ನಡಕ್ಕೊಂದು ಸೂರು ಕಟ್ಟುವ ಕೆಲಸಕ್ಕೆ ಸಾಹಿತ್ಯ ಪರಿಷತ್ ಮುಂದಾಗಿದೆ.
ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕಗಳ ಕಚೇರಿಗಳು ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಭವನ ನಿರ್ಮಾಣದಿಂದಾಗಿ ಪರಿಷತ್ತಿನ ಕಚೇರಿಗಳಿಗೆ ಸ್ಥಳ ಸಿಗಲಿದ್ದು, ಕನ್ನಡದ ಕಾರ್ಯಕ್ರಮಗಳಿಗೆ ಪುಟ್ಟದಾದರೂ, ಒಂದು ವೇದಿಕೆ ಸಿಕ್ಕಂತಾಗಿದೆ.
ಅನೇಕ ತೊಂದರೆಗಳಿಂದಾಗಿ ಇದುವರೆಗೆ ಪರಿಷತ್ ಭವನ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಆರಂಭವಾಗಿದ್ದು, ಸದ್ಯಕ್ಕೆ ಕನ್ನಡ ಕಾರ್ಯಕ್ರಮಗಳಿಗೆ ವೇದಿಕೆ ಸಿಕ್ಕಂತಾಗಲಿದೆ.
- ಸಿದ್ದಪ್ಪ ಹೊಟ್ಟಿ, ಕಸಾಪ ಜಿಲ್ಲಾಧ್ಯಕ್ಷ
ಭವನ ನಿರ್ಮಾಣದಿಂದ ಸಾಹಿತ್ಯ ಪರಿಷತ್ ಚಟುವಟಿಕೆಗಳಿಗೆ ಸಹಾಯಕವಾಗಲಿದೆ. ಈ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ಸುಮಾರು 200 ಜನರು ಕುಳಿತುಕೊಳ್ಳುವ ಸಾಮರ್ಥ್ಯದ ಸಭಾಭವನ ನಿರ್ಮಾಣ ಆಗಲಿದೆ. ಕೆಳ ಮಹಡಿಯಲ್ಲಿ ಕಚೇರಿ, ಗ್ರಂಥಾಲಯಗಳ ನಿರ್ಮಾಣ ಆಗಲಿದೆ.
- ಶ್ರೀನಿವಾಸ ಕರ್ಲಿ, ಕಸಾಪ ತಾ. ಅಧ್ಯಕ್ಷ