ಮತ್ತೆ ಬಾಲ ಬಿಚ್ಚಿದ ಸರಗಳ್ಳರು
ಗುಲ್ಬರ್ಗ: ಕಾರದ ಪುಡಿ ಎರಚಿ ನೂತನ ವಿದ್ಯಾಲಯ ಶಿಕ್ಷಕಿ ಕಾಲಿಂದಿ ಎಂಬುವರ ಮೂರೂವರೆ ತೊಲೆ ಬಂಗಾರದ ಮಾಂಗಲ್ಯ ಸರ ದೋಚಿದ್ದ ಘಟನೆ ಬೆನ್ನಲ್ಲೇ ಮತ್ತೆ ಸರಗಳ್ಳರ ಹಾವಳಿ ಶುರುವಾಗಿದೆ. ಶರಣಬಸವೇಶ್ವರ ಕೆರೆ ಪಕ್ಕದ ಕಲ್ಯಾಣಿ ಪೆಟ್ರೋಲ್ ಬಂಕ್ ಹತ್ತಿರದ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದ ದೇವಿನಗರದ ನಿವಾಸಿ ಸರೋಜಾ ಶರಣಪ್ಪ ಎಂಬುವರ 5 ತೊಲೆ ತೂಕದ ಬಂಗಾರದ ಮಾಂಗಲ್ಯ ಸರ ಕಳ್ಳರ ಪಾಲಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಸರಗಳ್ಳರು ಪಲ್ಸರ್ ಬೈಕ್ ಸವಾರಿಯಲ್ಲಿದ್ದರು ಎಂದು ತಿಳಿಸಿದ್ದಾರೆ. ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಂಥಾಲಯದಲ್ಲಿ ಸಭೆ
ಗುಲ್ಬರ್ಗ: ನಗರ ಕೇಂದ್ರ ಗ್ರಂಥಾಲಯದಲ್ಲಿ ಜು.17ರಂದು ನಗರ ಗ್ರಂಥಾಲಯ ಪ್ರಾಧಿಕಾರದ 45ನೇ ಸಭೆಯನ್ನು ಆಚರಿಸಲಾಯಿತು. ಗುಲ್ಬರ್ಗ ಮಹಾನಗರ ಪಾಲಿಕೆಯ ಮಹಾಪೌರರು ಹಾಗೂ ಪದನಿಮಿತ್ತ ಸಭಾಪತಿ ಅಲಿಯಾ ಶಿರಿನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರದ ಇತರೆ ಸದಸ್ಯರಾದ ರಮೇಶ ಕಮಕನೂರ್, ರಾಮಚಂದ್ರ ಖೇರು ರಾಠೋಡ್, ಗುಲ್ಬರ್ಗ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಕಲ್ಯಾಣರಾವ ಶರಣಪ್ಪ ಖೇಳಗಿ ಇದ್ದರು.