ಎಪಿಎಂಸಿ ಕಾಯ್ದೆ ವಿರೋಧಿಸಿ ಮುಂದುವರಿದ ಧರಣಿ
ಯಾದಗಿರಿ: ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಹೊರಟಿರುವ ಕ್ರಮವನ್ನು ಖಂಡಿಸಿ, ಇಲ್ಲಿನ ಗಂಜ್ ಆವರಣದಲ್ಲಿ ವರ್ತಕರು, ಗುಮಾಸ್ತರು ಮತ್ತು ಹಮಾಲರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಶುಕ್ರವಾರ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದೆ. ವರ್ತಕರ ಸಂಘದ ಜಿಲ್ಲಾಧ್ಯಕ್ಷ ಬಾಬು ದೋಖಾ ಮಾತನಾಡಿ, ಸರ್ಕಾರ ಕೂಡಲೇ ತಿದ್ದುಪಡಿ ಮಾಡಿರುವ ಕಾಯ್ದೆ ರದ್ದತಿಗೆ ಒತ್ತಾಯಿಸಿದರು. ರೈತರು ಬೆಳೆದ ಆಹಾರ ಧಾನ್ಯಗಳನ್ನು ಸರ್ಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಮಾರಲು ಅನುಮತಿ ನೀಡುತ್ತಿದ್ದು, ಕೃಷಿ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ತಕರಿಗೆ ಅನ್ಯಾಯ: ಸರ್ಕಾರ ತನ್ನ ನಿಲುವು ಬದಲಿಸುವವರೆಗೂ ಸತ್ಯಾಗ್ರಹ ಮುಂದುವರಿಯಲಿದೆ. ಧರಣಿಯಿಂದ ರಾಜ್ಯದಲ್ಲಿ ಲಕ್ಷಾಂತರ ಕೂಲಿಕಾರರ ಹೊಟ್ಟೆಗೆ ತಣ್ಣೀರಿನ ಬಟ್ಟೆ ಹಾಕಿಕೊಳ್ಳುವಂತಾಗಿದೆ. ಇಷ್ಟು ವರ್ಷ ಇಲ್ಲದ ನೀತಿಯನ್ನು ರಾಜ್ಯ ಸರ್ಕಾರ ಏಕಾಏಕಿ ತಿದ್ದುಪಡಿ ಮಾಡಿ ರೈತರಿಗೆ ಮತ್ತು ವರ್ತಕರಿಗೆ ತೀರಾ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಕೂಡಲೇ ಎಪಿಎಂಸಿ ನೀತಿ-2014 ಅನ್ನು ಕೈ ಬಿಡಬೇಕು. ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ಮಾಡಲು ಹೊರಟಿರುವದು ಖಂಡನಾರ್ಹ, ವರ್ತಕರ ಮತ್ತು ರೈತರ ನಡುವಿನ ಬಾಂಧವ್ಯಕ್ಕೆ ಹುಳಿ ಹಿಂಡುತ್ತಿರುವದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ವರ್ತಕರಾದ ಕಾಂತೀಲಾಲ ದೋಖಾ, ಶರಣಪ್ಪ ಒಟ್ಟಿ, ದಿನೇಶ ಗಾಂಧಿ, ವಿನಯ ಗಾಂಧಿ ಸೇರಿದಂತೆ ಇನ್ನಿತರರು ಇದ್ದರು. ಸತ್ಯಾಗ್ರಹದ ಹಿನ್ನೆಲೆಯಲ್ಲಿ ಗಂಜ್ ಆವರಣದ ಅಂಗಡಿ ಮುಂಗಟ್ಟು ಬಂದ್ ಮಾಡಿದ್ದು, ಬಿಕೋ ಎನ್ನುವಂತಿತ್ತು.