ಹಾಸ್ಟೆಲ್ ಇಲ್ದೆ ಕಲಿಕೆ ಅರ್ಧಕ್ಕೆ
ಯಾದಗಿರಿ: ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಸರ್ಕಾರ, ಅದಕ್ಕೆ ಅವಶ್ಯಕವಾದ ಸೌಲಭ್ಯಗಳನ್ನು ನೀಡುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಪರಿಣಾಮ ವಿದ್ಯಾರ್ಥಿಗಳು ಅರ್ಧಕ್ಕೇ ಶಾಲೆ ಬಿಡುವಂತಾಗಿದೆ.
ಇದಕ್ಕೊಂದು ಉತ್ತಮ ನಿದರ್ಶನ ಹಾಲಗೇರಾದ ಪ್ರೌಢಶಾಲೆ. ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ವಸತಿನಿಲಯವಿಲ್ಲದೆ ದೊಡ್ಡ ಸಮಸ್ಯೆಯಾಗಿದ್ದು, ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಅರ್ಧಕ್ಕೇ ಶಾಲೆ ಬಿಡುತ್ತಿರುವುದು ಸಾಮಾನ್ಯವಾಗಿದೆ.
ಗ್ರಾಮೀಣ ಭಾಗದಿಂದ ಹಾಲಗೇರಾಕ್ಕೆ ಬಂದು ಹೋಗಲು ಬಸ್ ಸೌಲಭ್ಯ ಅಷ್ಟಕ್ಕಷ್ಟೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವಸತಿನಿಲಯದ ಸೌಲಭ್ಯವಿದ್ದರೆ, ಕಲಿಯಲು ಅನುಕೂಲವಾಗಲಿದೆ.
ಹಾಲಗೇರಾ ಸುತ್ತಲಿನ ಐದು ಕಿ.ಮೀ. ವ್ಯಾಪ್ತಿಯಲ್ಲಿರುವ ಉಳ್ಳೆಸುಗೂರು, ಹೊಂಟೂರು, ಅರ್ಜುಣಗಿ, ಗೋಡಿಹಾಳ, ಕುಮನೂರ, ಗಡ್ಡೆಸೂಗುರ, ಶ್ರೀರಂಗಪುರ ಗ್ರಾಮಗಳಲ್ಲಿ ಪ್ರೌಢಶಾಲೆಗಳು ಇಲ್ಲ. ಹೀಗಾಗಿ ಈ ಗ್ರಾಮಗಳ ವಿದ್ಯಾರ್ಥಿಗಳು ಹಾಲಗೇರಾ ಪ್ರೌಢಶಾಲೆಗೇ ಬರಬೇಕು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಸ್ಸಿನ ಸೌಕರ್ಯವಿಲ್ಲದಿರುವುದರಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಲ್ಲದೆ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಲ್ಲೊಂದು ವಸತಿನಿಲಯ ಇದ್ದರೆ ತೊಂದರೆ ನೀಗಲು ಸಹಾಯವಾಗುತ್ತದೆ ಎಂಬುದು ಪಾಲಕರ ಸಲಹೆ. ಹಾಲಗೇರಾ ಗ್ರಾಪಂ ವ್ಯಾಪ್ತಿಯಲ್ಲಿ ಒಂದೇ ಪ್ರೌಢಶಾಲೆ ಇದೆ. ಸುತ್ತಲಿನ ಗ್ರಾಮಗಳ ಶಾಲೆಗಳಲ್ಲಿ ಕೇವಲ ಏಳನೇ ತರಗತಿಯವರೆಗೆ ಕಲಿಕೆಗೆ ಅವಕಾಶವಿದೆ. ಎಂಟು ಅಥವಾ ಒಂಬತ್ತನೇ ತರಗತಿಯ ಪ್ರವೇಶ ಪಡೆಯಬೇಕಾದರೆ ಹಾಲಗೇರಾಕ್ಕೆ ಬರಬೇಕು.
ದೂರದ ಯಾದಗಿರಿ ಇಲ್ಲವೇ ಶಹಾಪುರಕ್ಕೆ ಹೋಗಬೇಕು. ಉಳ್ಳವರ ಮಕ್ಕಳು ಎಲ್ಲಿಗೆ ಬೇಕಾದರೂ ಹೋಗಿ ಕಲಿಯುತ್ತಾರೆ. ಆದರೆ ಬಡವರ ಮಕ್ಕಳಿಗೆ ಆ ಶಕ್ತಿ ಇಲ್ಲ. ಅದಕ್ಕಾಗಿ ಅವರೆಲ್ಲ ವಸತಿನಿಲಯಗಳ ಆಶ್ರಯದಲ್ಲಿ ಕಲಿಕೆ ಮುಂದುವರಿಸುತ್ತಾರೆ. ಅದಕ್ಕಾಗಿ ಹಾಲಗೇರಾದಲ್ಲಿ ವಸತಿ ನಿಲಯದ ಅವಶ್ಯಕತೆ ಇದೆ ಎಂದು ಗ್ರಾಮದ ಯುವಕರು ಹೇಳುತ್ತಾರೆ.