ಶಿಕ್ಷಕರ ವಿರುದ್ಧ ದೂರು ದಾಖಲಿಸಿ: ಶಾಸಕ ಗುರು ಪಾಟೀಲ್ ಶಿರವಾಳ
ಶಹಾಪುರ: ಪಟ್ಟಣದ ದೊರಿಗುಡ್ಡ ಮೊರಾರ್ಜಿ ವಸತಿ ಶಾಲೆಯಲ್ಲಿ ಇತ್ತೀಚೆಗೆ ಶಿಕ್ಷಕರಿಬ್ಬರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಸೂಕ್ತ ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
ಮೊರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಹೇಳಿಕೆ ಪಡೆದ ನಂತರ ಶಾಲೆಯ ಪ್ರಧಾನ ಅಧ್ಯಾಪಕಿ ಹಾಗೂ ಇತರ ಶಿಕ್ಷಕರೊಡನೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಸತಿ ಶಾಲೆಗಳಿಗೆ ಗ್ರಾಮೀಣ ಭಾಗದದಿಂದ ವಿದ್ಯಾರ್ಥಿನಿಯರು ವ್ಯಾಸಂಗಕ್ಕಾಗಿ ಬರುತ್ತಿದ್ದು, ಮುಗ್ಧ ವಿದ್ಯಾರ್ಥಿನಿಯರ ಮೇಲೆ ಕೆಟ್ಟಭಾವನೆಯಿಂದ ವರ್ತಿಸುವ ಶಿಕ್ಷಕರ ಪ್ರವೃತ್ತಿ ಸರಿಯಲ್ಲ. ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಇಂತಹದ್ದನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಪ್ರಕರಣದ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.
ವಸತಿ ಶಾಲೆ ಸ್ಥಳಾಂತರ: ಈಗ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಕಿತ್ತೂರು ರಾಣಿ ವಸತಿ ಶಾಲೆಯು ಅಗಸ್ಟ್ನಲ್ಲಿ ಬೇವಿನಹಳ್ಳಿ ಬಳಿ ಇರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ಎಲ್ಲ ರೀತಿಯ ಅನುಕೂಲ ಮಾಡುವುದಾಗಿ ತಿಳಿಸಿದರು.
ಸರ್ಕಾರದ ನಿಲುವು ಸಲ್ಲ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಗಂಜ್ ವರ್ತಕರು ನಡೆಸಿದ ಮುಷ್ಕರದ ಸ್ಥಳಕ್ಕೆ ಶಾಸಕ ಗುರುಪಾಟೀಲ ಶಿರವಾಳ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸಿದರು.
ಸರ್ಕಾರದ ನಿಲುವು ಖಂಡನೀಯ. ಮಾರುಕಟ್ಟೆಯನ್ನೇ ಅವಲಂಬಿಸಿರುವ ವರ್ತಕರು, ಕಾರ್ಮಿಕರು ಮತ್ತು ರೈತರ ಹಿತವನ್ನು ಸಂಪೂರ್ಣ ಕಡೆಗಣಿಸುವ ನಿಲುವು ಸರ್ಕಾರ ತೆಗದುಕೊಂಡಿದ್ದು ಸರಿಯಲ್ಲ. ಮುಷ್ಕರಕ್ಕೆ ಬೆಂಬಲವಿದ್ದು, ನ್ಯಾಯ ಸಿಗುವತ್ತ ಪ್ರಯತ್ನಿಸುವುದಾಗಿ ಹೇಳಿದರು.
ಮಳೆಯ ಅಭಾವ, ಕಾಲುವೆಗಳ ನವೀಕರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಗೆ ಕಿರು ನೀರು ಸರಬರಾಜಿಗೆ 2 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ 1 ಕೋಟಿ ಮಂಜೂರು ಮಾಡಿದ್ದು, ಅವಶ್ಯವಿರುವ ಕಡೆ ಬೋರ್ವೆಲ್ ಕೊರೆಸುವುದು, ಟ್ಯಾಂಕ್ ಕೂಡಿಸುವುದು ಮತ್ತು ಸದ್ಯ ಇರುವ ಬಾವಿಗಳ ಮೂಲಕ ಪೈಪ್ಲೈನ್ ಮಾಡಿ ನೀರು ಕಲ್ಪಿಸುವ ಯೋಜನೆ ಇದೆ ಎಂದು ತಿಳಿಸಿದರು.
ಹಾಲು ವ್ಯತ್ಯಯ: ದುಬಾರಿ ಬೆಲೆಗೆ ಮಾರಾಟ
ಕೆಂಭಾವಿ: ಪಟ್ಟಣದಲ್ಲಿ ಶನಿವಾರ ಕೆಎಂಎಫ್ ನಂದಿನಿ ಹಾಲು ಪೂರೈಕೆಯಾಗದೆ ಜನತೆ ತೊಂದರೆ ಅನುಭವಿಸಿದರು. ಪ್ರತಿದಿನ ಬೆಳಗಿನ ಜಾವ ನಾಲ್ಕು ಘಂಟೆಗೆ ಪೂರೈಸುತ್ತಿದ್ದ ಹಾಲು ಒಂಭತ್ತು ಘಂಟೆಯಾದರೂ ಮನೆ ತಲುಪದೆ ಇದ್ದಾಗ ನಾಗರಿಕರು ವಿಚಾರಿಸಿದ್ದಾರೆ. ಗುಲ್ಬರ್ಗದಿಂದ ಹಾಲು ಪೂರೈಸುವ ವಾಹನ ಬಾರದ ಕಾರಣ ಹಾಲು ಪೂರೈಕೆಯಾಗಿಲ್ಲ ಎಂದು ಸ್ಥಳೀಯ ಹಾಲು ಮಾರಾಟಗಾರರು ತಿಳಿಸಿದರು. ಹಾಲು ಪೂರೈಸುವ ವಾಹನ ಮಾರ್ಗ ಮಧ್ಯೆ ತೊಂದರೆಗೀಡಾಗಿದೆ ಎಂದು ತಿಳಿದು ಬಂದಿದೆ.