ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮೊಳಕೆಯಲ್ಲೇ ಮುದುಡಿದ ಸೋಯಾಬಿನ್

Mainashree
Updated On : 21 Jul 2014, 10:12 am

ಚಿಂಚೋಳಿ: ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ಮಳೆಯ ಕೊರತೆ, ಬಿಸಿಲಿನ ತಾಪದಿಂದ ನಾಟಿ ಮಾಡಿದ ಸೋಯಾಬಿನ್ ಬೀಜ ಇನ್ನೂ ಮಣ್ಣಿನಲ್ಲಿ ಮೊಳಕೆ ಹಂತದಲ್ಲಿದೆ, ರೈತರು ಆತಂಕ ಪಡಬೇಕಿಲ್ಲ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ ಹೇಳಿದ್ದು, ಇದು ರೈತ ಸಮುದಾಯದಲ್ಲಿ ಅನುಮಾನ ಮೂಡಿಸಿದೆ.
ತಾಲೂಕಿನ ದೇಗಲಮಡಿ, ಐನೋಳಿ, ಚಂದಾಪುರ, ಬೋಗಾಲಿಂಗದಳ್ಳಿ, ಚಿಂಚೋಳಿ ಗ್ರಾಮಗಳ ರೈತರ ಹೊಲಗಳಿಗೆ ಭಾನುವಾರ ಭೇಟಿ ನೀಡಿ ಸೋಯಾಬಿನ್ ಬೆಳೆ ಮಣ್ಣಿನಲ್ಲಿರುವ ಮೊಳಕೆಯನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತಾಲೂಕಿನ ರೈತ ಸಂಪರ್ಕ ಕೇಂದ್ರದಿಂದ ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಮಾರಾಟ ಮಾಡಿರುವ ಸೋಯಾಬಿನ್ ಬೀಜ(ಪೌಂಡೇಶನ್ ಸೀಡ್ಸ್)ಗಳನ್ನು ವಿತರಣೆ ಮಾಡಲಾಗಿತ್ತು. ಸುಮಾರು 14,600 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆದರೆ ಅಲಸಂದಿ ಬೀಜ ಮೊಳಕೆಯೊಡೆದಿಲ್ಲ ಎಂದು ರೈತರು ನೀಡಿದ ದೂರಿನ ಮೇರೆಗೆ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ. ಕೆಲವು ರೈತರ ಹೊಲಗಳಲ್ಲಿ ಇನ್ನೂ ಮೊಳಕೆ ಹಂತದಲ್ಲಿವೆ, ಮಳೆಯ ಅಭಾವದಿಂದ ಸರಿಯಾಗಿ ಬೆಳೆದಿಲ್ಲ ಎಂದು ತಿಳಿಸಿದರು.
ಮಳೆ ಬಂದರೆ ಮೊಳಕೆ..: ತಾಲೂಕಿನಲ್ಲಿ ಕಳೆದ ವರ್ಷ ಜುಲೈನಲ್ಲಿ ವಾಡಿಕೆ ಮಳೆ 217.4 ಮಿಮೀ ಇತ್ತು. 256.1 ಮಿಮೀ ಮಳೆಯಾಗಿತ್ತು. ಆದರೆ ಪ್ರಸಕ್ತ ವರ್ಷ ಜೂನ್ ಮತ್ತು ಜುಲೈನಲ್ಲಿ ಮಳೆಯ ಅಭಾವದಿಂದಾಗಿ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾದರೆ ಎಲ್ಲ ಬೀಜಗಳು ಮೊಳಕೆಯೊಡೆಯಲಿವೆ. ಆದ್ದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದರು.
ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೃಷಿ ವಿಜ್ಞಾನಿಗಳಿಂದ ರೈತರಿಗೆ ತಿಳಿವಳಿಕೆ ನೀಡಲಾಗುವುದು. ಕೆಲವು ದಿನಪತ್ರಿಕೆಗಳಲ್ಲಿ ಸುಳ್ಳು ವರದಿ ಮಾಡಿ ರೈತರಲ್ಲಿ ಆತಂಕ ಸೃಷ್ಟಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾನಿ ಮೊಕಾಶಿ ತಿಳಿಸಿದರು.
ಪ್ರಗತಿಪರ ರೈತರಾದ ಗೌತಮ್ ಪಾಟೀಲ್, ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಮಲ್ಲಿಕಾರ್ಜುನ ಭೂಶೆಟ್ಟಿ, ಪಪಂ ಸದಸ್ಯರಾದ ಅಬ್ದುಲ್ ಬಾಸೀತ್, ಲಕ್ಷ್ಮಣ ಆವಂಟಿ, ಸಹಾಯಕ ಕೃಷಿ ನಿರ್ದೇಶಕ ಬಿ.ಎನ್. ಚೂಡೆ, ಸಹಾಯಕ ಕೃಷಿ ಅಧಿಕಾರಿ ಸಿರಾಜುದ್ದೀನ್ ಪಟೇಲ್ ಸಾಲೇಬೀರನಳ್ಳಿ, ಪ್ರದೀಪ ದೇಶಪಾಂಡೆ, ರೈತರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement