ರೋಗಗ್ರಸ್ಥವಾದ ಗಾಜರಕೋಟ ಆಸ್ಪತ್ರೆ
ಗುರುಮಠಕಲ್: ಸಮೀಪದ ಗಾಜರಕೋಟ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮೂಲ ಸೌಕರ್ಯಗಲ್ಲದೆ ರೋಗಗ್ರಸ್ಥವಾಗಿದ್ದು, ಸುತ್ತಲಮುತ್ತಲ ಜನತೆಗೆ ಆಸ್ಪತ್ರೆ ಇದ್ದೂ ಇಲ್ಲದಂತಾಂಗಿದೆ.
ಆಸ್ಪತ್ರೆ ಸುತ್ತಮುತ್ತ ಸಂಪೂರ್ಣ ಕೊಳಚೆ ನೀರು, ತಿಪ್ಪೆ ಗುಂಡಿಗಳಿಂದ ತುಂಬಿದ್ದು, ದುರ್ವಾಸನೆ ಬೀರುತ್ತಿದೆ. ಆಸ್ಪತ್ರೆಗೆ ಬಂದ ರೋಗಿಗಳು ರೋಗಕ್ಕೆ ಮತ್ತೊಂದು ಅಂಟಿಕೊಂಡೀತು ಎಂಬ ಭಯ ರೋಗಿಗಳನ್ನು ಕಾಡುತ್ತದೆ.
ಸಾಂಕ್ರಾಮಿಕ ರೋಗದ ಭೀತಿ: ಮಳೆಗಾಲ ಪ್ರಾರಂಭವಾಗಿರುವ ಕಾರಣ ಆಸ್ಪತ್ರೆ ಪ್ರವೇಶ ದ್ವಾರದಲ್ಲಿರುವ ದೊಡ್ಡ ಗುಂಡಿಯಲ್ಲಿ ನೀರು ತುಂಬಿದ್ದು ಸೊಳ್ಳೆಗಳ ಆವಾಸಸ್ಥಾನವಾಗಿದೆ. ಅಲ್ಲದೆ ಹಂದಿಗಳ ಈಜು ಕೊಳವಾಗಿ ಮಾರ್ಪಟ್ಟಿದೆ. ಆಸ್ಪತ್ರೆ ಸುತ್ತಮುತ್ತ ಪರಿಸರ ಮಾಲಿನ್ಯವಾಗುತ್ತಿರುವುದರಿಂದ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಆಸ್ಪತ್ರೆ ಮುಂಭಾಗದಲ್ಲಿ ವಾಸಿಸುವ ಮನೆಗಳಿದ್ದು, ಪಕ್ಕದಲ್ಲಿ ಪ್ರಾಥಮಿಕ ಶಾಲೆ ಇದೆ. ಶಾಲೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದಾದರೂ ಆಸ್ಪತ್ರೆ ಪರಿಸರ ಕಾಪಾಡಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗದೆ ಇರುವುದು ಇಲಾಖೆ ನೀರ್ಲಕ್ಷ್ಯ ಸಾಕ್ಷಿಯಾಗಿದೆ.
ಪಟ್ಟಣ ಕೇಂದ್ರದಿಂದ ಸುಮಾರು 12 ಕಿ.ಮೀ ದೂರವಿರುವುದರಿಂದ ಈ ಭಾಗದ ಈ ಆಸ್ಪತ್ರೆಯಲ್ಲಿ ಹೆರಿಗೆ ಸಂಬಂಧಿಸಿದ ಸಮರ್ಪಕ ವ್ಯವಸ್ಥೆಗಳಿಲ್ಲದೆ ಗುರುಮಠಕಲ್ ಸಮುದಾಯ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಈ ಸಮುದಾಯ ಆಸ್ಪತ್ರೆಗೆ ಬರಲು ಸಮರ್ಪಕ ವಾಹನ ವ್ಯವಸ್ಥೆ ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.
ಆ್ಯಂಬುಲೆನ್ಸ್‌ಗೆ ಒತ್ತಾಯ: ಅಲ್ಲದೇ ಅಪಘಾತ ಸೇರಿ ಯಾವುದೇ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ದೂರದ ಆಸ್ಪತ್ರೆಗೆ ಸಾಗಿಸುವುದು ತೀರಾ ಕಷ್ಟವಾಗುತ್ತಿದೆ. ಆದ್ದರಿಂದ ಗಾಜರಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸರ್ಕಾರ ಒಂದು ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿಕೊಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಇಷ್ಟೇ ಅಲ್ಲದೆ ಆರೋಗ್ಯ ಕೇಂದ್ರದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ಬಂದಿದ್ದು, ಮಳೆ ಬಂತೆಂದರೆ ಕಟ್ಟದೊಳಗೆ ಎಲ್ಲೆಂದರಲ್ಲಿ ಮಳೆ ನೀರು ಸುರಿಯುತ್ತದೆ. ಹಳೆಯ ಕಟ್ಟಡವಾಗಿರುವುದರಿಂದ ಗೋಡೆಗಳು ಹಾಗೂ ಕಿಟಕಿಗಳು ಹಾಳಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಿ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದೆ ಎಂಬುದು ಇಲ್ಲಿನ ಜನತೆ ಆಶಯವಾಗಿದೆ.