ಸೃಜನಶೀಲತೆಯಿದ್ದಲ್ಲಿ ಕಲಿಕೆ ಸಾಧ್ಯ
ಸೇಡಂ: ಸೃಜನಶೀಲತೆಯಿಂದ ಮಾತ್ರ ಕಲಿಕೆ ಸಾಧ್ಯ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದಿಂದ ಮಕ್ಕಳಿಗೆ ಹೊಸ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ ಎಂದು ಶಿಕ್ಷಕ ಅಶೋಕ ತೊಟ್ನಳ್ಳಿ ಹೇಳಿದರು.
ತಾಲೂಕಿನ ಸರಕಾರಿ ಪ್ರೌಢಶಾಲೆ ಜಕನಪಲ್ಲಿಯ ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆ ಶೈಕ್ಷಣಿಕ 2014- 15ನೇ ಸಾಲಿಗಾಗಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಮಕ್ಕಳಿಂದ ಮಕ್ಕಳನ್ನೇ ಆಯ್ಕೆಮಾಡಲಾಯಿತು.
ಮಕ್ಕಳ ವೇದಿಕೆ ಅಧ್ಯಕ್ಷನಾಗಿ ಲಕ್ಷ್ಮಣ ಬೇಡರ್ ಅತಿ ಹೆಚ್ಚು ಮತಗಳಿಂದ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭವಾನಿ ಆಡಕಿ, ಶಿವಲೀಲಾ ಶೇರಿ, ನವಿನರೆಡ್ಡಿ ಮಾಲಿ ಪಾಟಿಲ್, ಗುರುನಾಥರೆಡ್ಡಿ ಆಡಕಿ, ಹರ್ಷವರ್ಧನ ರೆಡ್ಡಿ ಆಯ್ಕೆಯಾಗಿದ್ದಾರೆ. ಮಕ್ಕಳು ಸಂಸತ್ ಮಾದರಿಯಲ್ಲಿ ಮತ ಚಲಾಯಿಸುವಾಗ ಶಿಕ್ಷಕರಾದ ದೊಡ್ಡಕಿಟ್ಟಪ್ಪ, ನೀಲಕಂಠ ನಾಯ್ಕ ಮಕ್ಕಳಿಗೆ ಸಲಹೆ ನೀಡಿದರು. ಪ್ರಸಕ್ತ ವರ್ಷದಲ್ಲಿ ಮಕ್ಕಳಿಂದ ನಾಟಕಗಳು, ಗ್ರಾಮಸ್ಥರಿಂದ ಜಾನಪದ ಕಲೆಗಳ ಪ್ರದರ್ಶನ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಕವಿಗೋಷ್ಠಿ, ಉಪನ್ಯಾಸ, ನಾಟಕಗಳ ವೀಡಿಯೋ ಮಾಲಿಕೆಗಳ ಪ್ರದರ್ಶನ, ಕಲಾತ್ಮಕ ಮತ್ತು ನಾಡಿನ ವೀರರ ಚಲನಚಿತ್ರ ಪ್ರದರ್ಶನ ಮತ್ತು ಮಕ್ಕಳ ಚಲನಚಿತ್ರಗಳು, ಕೋಲಾಟ, ದೊಡ್ಡಾಟ ಪ್ರಾತ್ಯಕ್ಷಿತೆ ಮತ್ತು ಪ್ರದರ್ಶನ, ಕ್ಲೇ ಮಾಡ್ಲಿಂಗ್, ಚಿತ್ರಕಲಾವಿದರ ಕಲಾಕೃತಿಗಳ ಪ್ರದರ್ಶನ, ಪರಿಸರ ಜಾಗೃತಿ, ಶಿಕ್ಷಕರ ದಿನಾಚರಣೆ, ಊರಿನ ಹಿರಿಯರಿಂದ ಕಥೆ ಹೇಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.