ಪತ್ರಿಕೆಗಳಿಗೆ ಪೂಜ್ಯನೀಯ ಸ್ಥಾನ
ಗುಲ್ಬರ್ಗ: ಸಾರ್ವಜನಿಕರು ಪತ್ರಿಕೆಗಳ ಮೇಲೆ ಅಪಾರ ವಿಶ್ವಾಸ ಹೊಂದಿದ್ದಾರೆ. ಅದಕ್ಕಾಗಿಯೇ ಪತ್ರಿಕೆಗಳಿಗೆ ಪೂಜ್ಯನೀಯ ಸ್ಥಾನವಿದೆ. ಪತ್ರಕರ್ತರು ಆ ಸ್ಥಾನದ ಜವಾಬ್ದಾರಿಯನ್ನರಿತು ವಸ್ತುನಿಷ್ಠ ವರದಿ ಮಾಡಬೇಕೆಂದು ಸಾಹಿತಿ ಪ್ರೊ. ವಸಂತ ಕುಷ್ಟಗಿ ಸಲಗೆ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಸಖೀ ಗೀತ ಮಾಸಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಮೊದಲಿಗಿಂತಲೂ ಈಗ ಪತ್ರಿಕಾರಂಗ ಅತ್ಯಂತ ಶ್ರೀಮಂತವಾಗಿದೆ. ತಾಯಿ, ಗುರು ಮತ್ತು ಪತ್ರಿಕೆ ಪೂಜ್ಯ ಸ್ಥಾನದಲ್ಲಿದ್ದು, ಪತ್ರಿಕೆಯವರು ಸಮಾಜದ ಜೊತೆಗೆ ಸ್ನೇಹದಿಂದಿರಬೇಕು ಎಂದು ಹೇಳಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ರಾಮಕೃಷ್ಣ ಮಾತನಾಡಿ, ಸಂಘಟನೆಯಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ. ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಸ್ಪಂದಿಸುವತ್ತ ಇಂದಿನ ಯುವ ಪೀಳಿಗೆ ವಾಲಬೇಕು ಎಂದರು. ಕಾರ್ಯಕ್ರಮವನ್ನು ಎಂರೇಲ್ಸ್ ಕಂಪನಿ ಸಿಇಒ ನಾಗೇಂದ್ರ ಉದ್ಘಾಟಿಸಿದರು. ಪತ್ರಿಕೆ ಸಂಪಾದಕಿ ಹರಿಣಿ ದಿನೇಶ್, ಉಪ ಸಂಪಾದಕ ವೇಣುಗೋಪಾಲ ಇತರರಿದ್ದರು. ವರದಿಗಾರ ರಾಧಾಕೃಷ್ಣ ಸ್ವಾಗತಿಸಿದರು. ಹಣಮಂತ ಖಜೂರಿ ನಿರೂಪಿಸಿ ವಂದಿಸಿದರು.