ಜಲಾಶಯದಲ್ಲಿ ಸದ್ಯ 45 ಟಿಎಂಸಿ ನೀರು
ಹುಣಸಗಿ: ಪ್ರಸಕ್ತ ಸಾಲಿನ ಮುಂಗಾರು ಮಳೆ ತೀರಾ ದುರ್ಬಲವಾಗಿರುವುದರಿಂದ ಜುಲೈ ತಿಂಗಳು ಕಳೆಯುತ್ತ ಬಂದರೂ ನಾರಾಯಣಪುರ ಜಲಾಶಯ ಬಣಗುಡುತ್ತಿದೆ. ಇದು ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮೂಡಸಿದೆ.
ಬುಧವಾರ ಆಲಮಟ್ಟಿ ಜಲಾಶಯಕ್ಕೆ 60 ಸಾವಿರ ಕ್ಯುಸೆಕ್ ನೀರಿನ ಒಳಹರಿವಿತ್ತು. ಆಲಮಟ್ಟಿ ಜಲಾಶಯದಲ್ಲಿ ಕೇವಲ 45 ಟಿಎಂಸಿ ಸಂಗ್ರಹವಿದೆ. ಸೋಮವಾರ, ಮಂಗಳವಾರ 70- 80 ಸಾವಿರ ಕ್ಯುಸೆಕ್ ನೀರಿನ ಒಳ ಹರಿವಿತ್ತು.
ಇದೇ ವೇಳೆ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕುಸಿದಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಜಲಾಶಯಕ್ಕೆ 11 ಸಾವಿರ ಕ್ಯೂಸೆಕ್ ನೀರು ಸತತ 24 ತಾಸು ಹರಿದು ಬಂದರೆ ಆಗ 1 ಟಿಎಂಸಿಯಷ್ಟು ನೀರು ಸಂಗ್ರಹವಾಗುತ್ತದೆ ಎಂದು ಎಂಜನೀಯರರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಇನ್ನು ಮಲಪ್ರಭಾ ನದಿಯ ನೀರು ನಾರಾಯಣಪುರ ಜಲಾಶಯಕ್ಕೆ ನೇರವಾಗಿ ಬಂದು ಸೇರುವುದು. ಸದ್ಯ ಅಲ್ಲಿಂದ 455 ಕ್ಯುಸೆಕ್ ನೀರಿನ ಒಳಹರಿವಿದೆ. ಬುಧವಾರ ನಾರಾಯಣಪುರ ಜಲಾಶಯದ ಮಟ್ಟ 487.870 ಮೀಟರ್ ಇತ್ತು.
ನೀರಿನ ಮಟ್ಟ: ನಾರಾಯಣಪುರ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 487.870 ಮೀ. ಇದ್ದರೆ, ಕಳೆದ ವರ್ಷ 491.330 ಮೀ.ನಷ್ಟಿತ್ತು. ಸಂಗ್ರಹ ಸದ್ಯ 16.912 ಮೀ, ಕಳೆದ ವರ್ಷ 29.993 ಮೀ. ಇತ್ತು. ಅದೇ ರೀತಿ ಸದ್ಯ 2.152 ಟಿಎಂಸಿ ನೀರಿದ್ದರೆ, ಕಳೆದ ವರ್ಷ 14.433 ಟಿಎಂಸಿ ಇತ್ತು. ಸದ್ಯ 455 ಕ್ಯೂಸೆಕ್ ಒಳಹರಿವಿದ್ದರೆ ಕಳೆದ ವರ್ಷ 1,38,960 ಕ್ಯುಸೆಕ್ ಇತ್ತೆಂದು ಜಲಾಶಯ ಮೂಲಗಳು ತಿಳಿಸಿವೆ.
ಬತ್ತ ನಾಟಿಗೆ ರೈತರು ಸಿದ್ಧ: ಈಗಾಗಲೇ ರೈತರು ಬತ್ತದ ಸಸಿಗಳನ್ನು ತಯಾರಿಸಿ ಸಿದ್ಧ ಮಾಡಿಕೊಂಡಿದ್ದಾರೆ. ಕಾಲುವೆಗೆ ನೀರು ಹರಿದಾಕ್ಷಣ ನಾಟಿ ಭರಾಟೆ ಆರಂಭವಾಗಲಿದೆ. ಒಟ್ಟಾರೆ ನಿಗಮ ನೀರಾವರಿ ಸಲಹಾ ಸಮಿತಿಯ ಸಭೆಯನ್ನು ತುರ್ತಾಗಿ ಕರೆಯಲು ರೈತರು ಆಗ್ರಹಿಸಿದ್ದಾರೆ.
ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ, ಮುಂಗಾರು ಹಂಗಾಮಿಗೆ 45 ಟಿಎಂಸಿ ನೀರು ಬೇಕು. ಅಂದರೆ ಮಳೆ ಮತ್ತು ಕಾಲುವೆಯ ನೀರು ಬಳಸಿ 90 ದಿನಗಳವರೆಗೆ ಮಾತ್ರ ನೀರು ಹರಿಸಲು ಸಾಧ್ಯ ಎಂಬುದು ನೀರಾವರಿ ಅಧಿಕಾರಿಗಳ ಅನಿಸಿಕೆ.