ಮಹಿಳೆಯರೇ, ದೌರ್ಜನ್ಯ ಸಹಿಸಬೇಡಿ: ಹೊಸ್ಮನಿ
ಶಹಾಬಾದ್: ಮಹಿಳೆಯರು ವಿಶೇಷವಾಗಿ ವಿದ್ಯಾರ್ಥಿನಿಯರು ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಸಹಿಸದೆ ಪ್ರತಿಭಟಿಸಿ, ಇಲ್ಲವಾದಲ್ಲಿ ಪೋಷಕರಿಗೆ, ಪೊಲೀಸ್‌ರಿಗೆ ಮಾಹಿತಿ ನೀಡಿ ಎಂದು ಶಹಾಬಾದ್ ನಗರ ಪೊಲೀಸ್ ಠಾಣೆ ಪಿಐ ವಿಜಯಕುಮಾರ ಹೊಸ್ಮನಿ ಹೇಳಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲೆ ದೌರ್ಜನ್ಯ ಕುರಿತು ಪೊಲೀಸ್ ಇಲಾಖೆ ಬುಧವಾರ ಶಹಾಬಾದ್ ಬಳಿಯ ಭಂಕೂರ ಗ್ರಾಮದಲ್ಲಿಯ ಆದಿ ಜಾಂಬವ ಶಿಕ್ಷಣ ಸಂಸ್ಥೆಯ ಕರ್ನಾಟಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿನಿಯರು ಒಬ್ಬಂಟಿಯಾಗಿ ಮನೆಪಾಠ, ಅಟೋದಲ್ಲಿ ಪ್ರಯಾಣ ಮಾಡದೆ ಪರಿಚಿತರೊಂದಿಗೆ ಹೋಗುವುದು ಒಳ್ಳೆಯದು. ವಿದ್ಯಾರ್ಥಿನಿಯರೊಂದಿಗೆ ಯಾರಾದರು ಅಸಭ್ಯವಾಗಿ ವರ್ತಿಸಿದಲ್ಲಿ ಪೋಷಕರಿಗೆ, ಶಾಲಾ ಕಾಲೇಜಿನ ಪ್ರಾಧ್ಯಾಪಕರಿಗೆ ಮಾಹಿತಿ ನೀಡಿ, ಇಲ್ಲವೆ ಪೊಲೀಸರಿಗೆ ಮಾಹಿತಿ ನೀಡಿ ಎಂದರು. ಪತ್ರಕರ್ತ ಕೆ. ರಮೇಶ ಭಟ್ಟ, ಪ್ರಾಚಾರ್ಯ ಎನ್.ಡಿ. ತಾರನಾಳ ಮಾತನಾಡಿದರು. ವೇದಿಕೆಯ ಮೇಲೆ ಉಪನ್ಯಾಸಕ ವಿವೇಕಾನಂದ ಹಿರೇಮಠ ಉಪಸ್ಥಿತರಿದ್ದರು. ರಂಜಣಗಿ ಸ್ವಾಗತಿಸಿ, ಮರಲಿಂಗ ಯಾದಗಿರಿ ವಂದಿಸಿದರು.