ಅತ್ಯಾಚಾರ ಪ್ರಕರಣ: ಸಚಿವರೇ ಹೊಣೆ ಹೊರಲಿ
ಶಹಾಪುರ: ಅತ್ಯಾಚಾರ ಪ್ರಕರಣಗಳು ಹೆಚ್ಚೆಚ್ಚು ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಗೃಹ ಸಚಿವರು ಕಠಿಣ ನಿಲುವು ತಾಳದಿರುವುದು ಅತ್ಯಂತ ಖಂಡನೀಯ ಎಂದು ಕನ್ನಡ ಸೇನೆಯ ಸಂಘಟನಾ ಕಾರ್ಯದರ್ಶಿ ದೇವು ಗುಡಿ ಸರ್ಕಾರದ ನಿಷ್ಕಾಳಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಅತ್ಯಾಚಾರ ಎಸಗಿದವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಕಾನೂನು ಸುವ್ಯವಸ್ಥೆಗೆ ಕಠಿಣ ನಿಲುವು ತಾಳಬೇಕು. ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ತಹಸೀಲ್ದಾರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆ ತಾಲೂಕಾದ್ಯಕ್ಷ ವೀರೇಶ ಅಂಗಡಿ, ಮಲ್ಲಿಕಾರ್ಜುನ ನಗನೂರ, ವಿಜಯ ಚಿಗರಿ, ಲೋಕನಾಥ ದೋರನಹಳ್ಳಿ, ಹಣಮಂತಸಗರ, ನಿಂಗಣ್ಣ ರಸ್ತಾಪುರ, ರಾಕೇಶ ಮದ್ರಿಕಿ, ನಿಂಗಣ್ಣಗೌಡ, ಮಲ್ಲುದೊರೆ ನಾಗರಾಜಸಗರ, ಅಂಬರೇಶಗೌಡ ಸಗರ, ರವಿಚಂದ್ರ ಇತರರು ಇದ್ದರು.
ಗ್ರಂಥಾಲಯ ಉದ್ಘಾಟನೆ ಇಂದು
ಯಾದಗಿರಿ: ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಜ್ಞಾನಂ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿದ್ದು ಅದರ ಉದ್ಘಾಟನೆ ಕಾರ್ಯಕ್ರಮವನ್ನು ಜು.25ರಂದು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಗ್ರಂಥಾಲಯ ವ್ಯವಸ್ಥಾಪಕ ಬಸವರಾಜ ವಂಕಲಿ ಉದ್ಘಾಟಿಸುವರು. ಮುಖ್ಯ ಅಥಿತಿಗಳಾಗಿ ತಾಪಂ ಉಪಾಧ್ಯಕ್ಷ ಶರಣಪ್ಪ ಹೊನಗೇರಾ, ನಗರಸಭೆ ವ್ಯವಸ್ಥಾಪಕ ನೀಲಕಂಠರಾವ್, ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಭೀಮರಾಯ ಬಂದಳ್ಳಿ ಆಗಮಿಸುವರು. ಅಧ್ಯಕ್ಷತೆಯನ್ನು ವಿಕ್ಟರ್ ರಾಜು ವಹಿಸುವರು ಎಂದು ಟ್ರಸ್ಟ್ ತಿಳಿಸಿದೆ.