ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ವಿದ್ಯಾರ್ಥಿಗಳ ಒತ್ತಾಯ
ಚಿಂಚೋಳಿ: ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಹೆಚ್ಚಳ ಖಂಡಿಸಿ ಪಟ್ಟಣದ ಸಿ.ಬಿ. ಪಾಟೀಲ್ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳು ರಸ್ತೆ ತಡೆ, ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪೊಲೀಸರು ಆರೋಪಿಗಳನ್ನು ಬಂಧಿಸಿ ಕ್ರಮ ಕೈಕೊಳ್ಳಬೇಕು. ಆರೋಪಿಗಳನ್ನು ಬಂಧಿಸಿ ಬಿಡುಗಡೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಲಾ- ಕಾಲೇಜು ವಿದ್ಯಾರ್ಥಿನಿಯರು ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ. ಅಸುರಕ್ಷತಾ ಪರಿಸ್ಥಿತಿ ನಿರ್ಮಾಣವಾಗಿದೆ, ಸಮಾಜದಲ್ಲಿ ಇಂತಹ ಹೀನ ಕಾಮುಕ ಕೃತ್ಯಗಳನ್ನು ಕಂಡು ಪಾಲಕರು ಮಕ್ಕಳನ್ನು ಶಾಲಾ- ಕಾಲೇಜುಗಳಿಗೆ ಕಳುಹಿಸಲು ಹೆದರುತ್ತಿದ್ದಾರೆ. ಸರ್ಕಾರ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ವಿದ್ಯಾರ್ಥಿನಿಯರ ಸುರಕ್ಷತೆಗೆ ಗೃಹ ರಕ್ಷಕ ದಳ ಮತ್ತು ಪೊಲೀಸರನ್ನು ನೇಮಿಸಬೇಕು. ಕಾಲೇಜುಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಬೇಕೆಂಬ ವಿವಿಧ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗೆ ಸಲ್ಲಿಸಿದರು. ಒಕ್ಕೂಟದ ಮುಖಂಡ ವಿಶ್ವಪ್ರಕಾಶ ಕಟ್ಟಿಮನಿ, ಪ್ರಸಾದ ಚಿಂಚೋಳಿ, ಆನಂದಕುಮಾರ ಪೂಜಾರಿ, ಆಕಾಶ ಕೊಳ್ಳುರ, ನಾಗಾರ್ಜುನ ಕಟ್ಟಿ, ಪ್ರಭಾಕರ, ಮಿಠುರಾಜ್ ಕಟ್ಟಿ ಇದ್ದರು.